ಮಂಗಳೂರು: ಗುಂಪು ಹತ್ಯೆ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ಮಂಗಳೂರು: ನಗರ ಹೊರವಲಯದ ಕುಡುಪುವಿನಲ್ಲಿ ಮೊನ್ನೆ ನಡೆದ ವಲಸೆ ಕಾರ್ಮಿಕನ ಗುಂಪು ಹತ್ಯೆ ಮತ್ತು ರಾಜ್ಯ ಗೃಹಸಚಿವರ ಹೇಳಿಕೆಯನ್ನು ಖಂಡಿಸಿ ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾ ಸಮಿತಿಯ ವತಿಯಿಂದ ಬುಧವಾರ ಮಂಗಳೂರು ಮಿನಿವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ ಗುಂಪು ಹತ್ಯೆಯ ಪ್ರಮುಖ ರೂವಾರಿ ಸ್ಥಳೀಯ ಬಿಜೆಪಿ ನಾಯಕ ರವೀಂದ್ರ ನಾಯ್ಕ್ ಆಗಿದ್ದಾನೆ. ಆತನ ಪ್ರಚೋದನೆಯಿಂದಲೇ ಹತ್ಯೆಯಾಗಿದೆ. ಪೊಲೀಸರು ಆತನನ್ನು ಬಂಧಿಸುವ ಬದಲು ಬಿಜೆಪಿ ಸಂಸದರು, ಶಾಸಕರ ಕಚೇರಿಯಲ್ಲಿ ಒಡಾಡಲು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಗೃಹಸಚಿವರು ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಬ್ದಾರಿ ಹೇಳಿಕೆ ನೀಡಿದ್ದಾರೆ. ಪೊಲೀಸರ ನಡೆಯೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಹಾಗಾಗಿ ಈ ಪ್ರಕರಣದ ಸಮಗ್ರ ತನಿಖೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ತನಿಖಾ ತಂಡವನ್ನು ರಚಿಸಬೇಕು ಎಂದು ರಿಯಾಝ್ ಕಡಂಬು ಆಗ್ರಹಿಸಿದರು.
ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ನಗರ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.