×
Ad

ಪಠ್ಯ ಪುಸ್ತಕ, ಪುಸ್ತಕ ರವಾನೆಗೆ ʼಜ್ಞಾನ ಅಂಚೆʼ ಆರಂಭ

Update: 2025-05-01 18:42 IST

ಮಂಗಳೂರು: ಪಠ್ಯಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ಭಾರತೀಯ ಅಂಚೆ ಇಲಾಖೆಯ ಜ್ಞಾನ ಅಂಚೆ ಸೇವೆಯು ಮೇ 1ರಿಂದ ಆರಂಭಗೊಂಡಿದೆ. ಜ್ಞಾನ ಅಂಚೆ ಸೇವೆಯನ್ನು ಗುರುವಾರ ಮಂಗಳೂರು ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಘಾಟಿಸಲಾಯಿತು.

ಈ ಸೇವೆ ಯನ್ನು ಗ್ರಾಹಕರು ಮಂಗಳೂರು ಮತ್ತು ಕುಲಶೇಖರ ಪ್ರದಾನ ಅಂಚೆ ಕಚೇರಿ ಹಾಗೂ ಎಲ್ಲಾ ಉಪ ಅಂಚೆ ಕಚೇರಿಗಳಲ್ಲಿ ಪಡೆಯಬಹುದು.

ಈ ಮೊದಲು ಪಠ್ಯ ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳನ್ನು ಭಾರತೀಯ ಅಂಚೆಯ ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್‌ಗಳ ಮೂಲಕ ಕಳುಹಿಸಬೇಕಿತ್ತು. ಭಾರತೀಯ ಅಂಚೆ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತರುವ ಮೂಲಕ ಬುಕ್ ಪ್ಯಾಕೆಟ್ ಸೇವೆಯನ್ನು 2024ರ ಜೂನ್‌ನಲ್ಲಿ ರದ್ದುಪಡಿಸಲಾಗಿತ್ತು. ಬುಕ್ ಪೋಸ್ಟ್ ಸೇವೆಯ ಹೆಸರನ್ನು ಬದಲಿಸಿ ದರವನ್ನು ಏರಿಕೆ ಮಾಡಲಾಗಿತ್ತು.

ಬುಕ್ ಪ್ಯಾಕೆಟ್ ಮತ್ತು ಬುಕ್ ಪೋಸ್ಟ್ ಸೇವೆಗಳ ರದ್ದತಿಯಿಂದ ಪಠ್ಯಪುಸ್ತಕ, ಸಾಹಿತ್ಯ ಕೃತಿಗಳ ರವಾನೆ ದುಬಾರಿ ಬಾಬತ್ತಾಗಿ ಬದಲಾಗಿತ್ತು. ಈ ಬಗ್ಗೆ ಪ್ರಕಾಶಕರು, ಪ್ರಕಾಶಕರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿ ದ್ದವು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಅಂಚೆ ಇಲಾಖೆಗೆ ಪತ್ರ ಬರೆದಿತ್ತು. ಈಗ ಭಾರತೀಯ ಅಂಚೆ ಕಾಯ್ದೆಗೆ ಮತ್ತೆ ತಿದ್ದುಪಡಿ ತಂದಿರುವ ಕೇಂದ್ರ ಸರಕಾರವು, ಜ್ಞಾನ ಅಂಚೆ ಸೇವೆ ಆರಂಭಕ್ಕೆ ಮುಂದಾಗಿದೆ. ಪಠ್ಯಪುಸ್ತಕ, ಸಾಹಿತ್ಯ ಕೃತಿಗಳಿಗಷ್ಟೇ ಈ ಸೇವೆ ಮೀಸಲಾಗಿದೆ. ಬಿಲ್ ಬುಕ್‌ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಈ ಸೇವೆ ಲಭ್ಯವಿಲ್ಲ.

ಈ ಸೇವೆಯಡಿ ಪುಸ್ತಕಗಳನ್ನು ಕಳುಹಿಸುವವರು ಅದರ ಮೇಲೆ ಜ್ಞಾನ ಅಂಚೆ ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಅಲ್ಲದೆ ಕಳುಹಿಸುವವರು ಮತ್ತು ಪಡೆಯುವವರ ಜತೆಗೆ ಪ್ರಕಾಶಕರ ಹೆಸರು ಹಾಗೂ ವಿಳಾಸ ಇರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹ ಇರಬಾರದು. ಕನಿಷ್ಠ 300 ಗ್ರಾಂನಿಂದ ಗರಿಷ್ಠ 5 ಕೆ.ಜಿ.ವರೆಗಿನ ಪಾರ್ಸಲ್‌ಗಳನ್ನು ಮಾತ್ರ ಜ್ಞಾನ ಅಂಚೆ ಎಂದು ಪರಿಗಣಿಸಲಾಗು ತ್ತದೆ ಎಂದು ಅಂಚೆ ಇಲಾಖೆ ಷರತ್ತು ವಿಧಿಸಿದೆ. ಈ ಷರತ್ತುಗಳನ್ನು ಉಲ್ಲಂಘಿಸುವ ಪಾರ್ಸಲ್‌ಗಳನ್ನು, ಭಾರತೀಯ ಅಂಚೆ ಪಾರ್ಸಲ್ ಎಂದು ಪರಿಗಣಿಸಲಾಗುತ್ತದೆ. ಅಂತಹ ಪಾರ್ಸಲ್‌ಗಳಿಗೆ ಜ್ಞಾನ ಅಂಚೆ ಶುಲ್ಕ ಮತ್ತು ಭಾರತೀಯ ಅಂಚೆ ಪಾರ್ಸಲ್ ಶುಲ್ಕದ ನಡುವಣ ವ್ಯತ್ಯಾಸದ ಎರಡು ಪಟ್ಟು ದಂಡ ವಿಧಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News