×
Ad

ಗೃಹ ಸಚಿವರಿಂದ ಅಶಾಂತಿ ಸೃಷ್ಟಿ: ಸತೀಶ್ ಕುಂಪಲ ಆರೋಪ

Update: 2025-05-03 19:43 IST

ಮಂಗಳೂರು: ಸುಹಾಸ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳೂರಿಗೆ ಭೇಟಿ ನೀಡಿರುವ ಗೃಹಸಚಿವ ಡಾ. ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶಾಂತಿ ಕಾಪಾಡುವ ಬದಲು ಅಶಾಂತಿ ಸೃಷ್ಟಿಸಿ, ಬೆಂಕಿ ಹಾಕಿ ತೆರಳಿದ್ದಾರೆ. ಆ್ಯಂಟಿ ಕಮ್ಯುನಲ್ ಫೋರ್ಸ್ ಸ್ಥಾಪನೆ ಮೂಲಕ ಇನ್ನು ನಿರಂತರವಾಗಿ ಹಿಂದೂಗಳನ್ನು ಮಟ್ಟ ಹಾಕುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕುಂಪಲ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹತ್ಯೆಯಲ್ಲಿ ಮೂಲಭೂತವಾದಿ ಸಂಘಟನೆಗಳೂ ಪಾಲ್ಗೊಂಡಿರುವ ಶಂಕೆ ಇದೆ, ಹಾಗಾಗಿ ಎನ್‌ಐಎ ತನಿಖೆ ನಡೆಸುವುದು ಸೂಕ್ತ ಎಂದರು.

ಗೃಹಸಚಿವರು ಬರುವಾಗ ನಮಗೆ ಸಹಜವಾಗಿ ಭರವಸೆ ಇತ್ತು. ಶಾಸಕರನ್ನು ಭರವಸೆಗೆ ತೆಗೆದುಕೊಂಡು ಮಾತನಾಡುವ ನಿರೀಕ್ಷೆ ಇತ್ತು. ಆದರೆ ಅವರು ಕೇವಲ ಏಕಮುಖವಾಗಿ ಮುಸ್ಲಿಂ ಸಮುದಾಯದ ಮುಖಂಡರನ್ನಷ್ಟೇ ಕರೆದು ಸಭೆ ನಡೆಸಿದ್ದಾರೆ. ನಮ್ಮಲ್ಲಿ ಹಿರಿಯ ಶಾಸಕರಿದ್ದಾರೆ, ಸಂಸದರಿದ್ದಾರೆ, ಯಾರನ್ನೂ ಮಾತನಾಡಿಸಿಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದರು.

ಪ್ರಸಕ್ತ ಸನ್ನಿವೇಶದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಕೊಲೆ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಪಾರದರ್ಶಕ ರೀತಿಯಲ್ಲಿ ನಡೆಸುವುದರ ಬಗ್ಗೆ ಹಾಗೂ ತನಿಖೆಯಿಂದ ನ್ಯಾಯಸಿಗುವ ನಂಬಿಕೆ ಇಲ್ಲ ಹಾಗಾಗಿ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಬೇಕು ಎಂದರು.

ಜನನಿಬಿಡ ಪ್ರದೇಶದಲ್ಲಿ ಈ ಕೊಲೆ ಆಗಿದೆ. ಬಜಪೆ ಪೊಲೀಸ್ ಸ್ಟೇಷನ್‌ನ ಪೊಲೀಸರ ಬಗ್ಗೆಯೂ ತನಿಖೆಯಾಗಬೇಕು. ಅಲ್ಲದೆ ಘಟನೆ ವೇಳೆ ಸ್ಥಳದಲ್ಲಿ ಇದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಿನ್ನೆಯಷ್ಟೇ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಸುದ್ದಿಗೋಷ್ಠಿ ನಡೆಸಿ, ಸುಹಾಸ್ ಶೆಟ್ಟಿ ಹತ್ಯೆಗೂ ಫಾಝಿಲ್ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ, ಈ ಬಗ್ಗೆ ತಮಗೆ ಫಾಝಿಲ್ ಕುಟುಂಬದವರೇ ತಿಳಿಸಿರುವುದಾಗಿ ಕ್ಲೀನ್‌ಚಿಟ್ ಕೊಟ್ಟಿದ್ದಾರೆ. ಹೀಗೆ ಮಾಡಿದರೆ ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸುವುದು ಹೇಗೆ. ಈಗ ನೋಡಿದರೆ ಫಾಝಿಲ್ ಸಹೋದರ ಆದಿಲ್ ಎಂಬಾತನೇ ಕೊಲೆಗೆ 5 ಲಕ್ಷ ರೂ. ಸುಪಾರಿ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿರುತ್ತಾರೆ. ಖಾದರ್ ಅವರ ನೈಜ ಬಣ್ಣ ಅನಾವರಣಗೊಂಡಿದೆ ಎಂದು ಟೀಕಿಸಿದರು.

ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯಕ್ ಉಳಿಪಾಡಿ, ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಮುಖಂಡರಾದ ಸಂಜಯ್ ಪ್ರಭು, ನಂದನ್ ಮಲ್ಯ, ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವಾರ್, ವಸಂತ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News