ಸರಳ ಮದುವೆಗಾಗಿ ಕಾನೂನು ಮಾಡಲು ಹೊರಟಾಗ ನನಗೆ ಬೆಂಬಲ ಸಿಗಲಿಲ್ಲ: ಟಿ.ಬಿ. ಜಯಚಂದ್ರ
ಧರ್ಮಸ್ಥಳ: ರಾಜ್ಯದಲ್ಲಿ ಸರಳ ಮದುವೆಗಾಗಿ ಕಾನೂನು ಜಾರಿ ಮಾಡಲು ಹೊರಟಾಗ ನನಗೆ ಆಗಿನ ಸಚಿವ ಸಂಪುಟದ ಕೆಲವು ಸದಸ್ಯರಿಂದಲೇ ಸೂಕ್ತ ಬೆಂಬಲ ದೊರೆಯಲಿಲ್ಲ ಎಂದು ಮಾಜಿ ಕಾನೂನು ಸಚಿವ ಹಾಗೂ ಕರ್ನಾಟಕ ಸರಕಾರದ ದೆಹಲಿ ಪ್ರತಿನಿಧಿ (ಸಂಪುಟ ದರ್ಜೆ)ಟಿ.ಬಿ. ಜಯ ಚಂದ್ರ ತಿಳಿಸಿದ್ದಾರೆ.
ಅವರು ಶನಿವಾರ ಧರ್ಮಸ್ಥಳದಲ್ಲಿ 53ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾನೂನು ಸಚಿವನಾಗಿ ಸರಳ ಮದುವೆ ಗಾಗಿ ಮಾಡಲು ನನಗೆ ನಮ್ಮ ಸಂಪುಟದಲ್ಲೇ ಜೊತೆ ಕೆಲವು ಸಚಿವ ರಿಂದಲೇ ವಿರೋಧ ಬಂದ ಕಾರಣ ನಾನು ಕಾನೂನು ಜಾರಿ ಮಾಡಲು ಸೋತುಹೋದೆ.ಆದರೆ ಕಳೆದ 53ವರುಷಗಳಿಂದ ಧರ್ಮಸ್ಥಳ ದಲ್ಲಿ ವೀರೇಂದ್ರ ಹೆಗ್ಗಡೆ ಯವರು ಯಾವುದೇ ಸಮಸ್ಯೆ ಎದುರಾಗಿ ದ್ದರೂ ಸಾಮೂಹಿಕ ಸರಳ ವಿವಾಹ ವನ್ನು ಸಾಂಗವಾಗಿ ನಡೆಸಿ ಕೊಂಡು ಬಂದಿರುವುದು ವಿಶ್ವದಲ್ಲೇ ಒಂದು ದಾಖಲೆ ಎಂದು ನೂತನ ವಧು ವರರಿಗೆ ಶುಭ ಹಾರೈಸಿದರು.
*ದುಂದು ವೆಚ್ಚ ಮಾಡಬೇಡಿ:- ವರದಕ್ಷಿಣೆ ಹಾಗೂ ಮದುವೆಗಾಗಿ ಮಾಡುವ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ಧರ್ಮಸ್ಥಳದಲ್ಲಿ 1972 ರಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಆರಂಭಿ ಸಿದ್ದು ಪ್ರಥಮ ವರ್ಷದಲ್ಲಿ 88 ವಧೂ-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಧರ್ಮಸ್ಥಳದಲ್ಲಿ ಪ್ರತಿ ವರ್ಷ ಏಪ್ರಿಲ್/ಮೇ ತಿಂಗಳಿನಲ್ಲಿ ಉಚಿತ ಸಾಮೂಹಿಕ ವಿವಾಹ ಆಯೋಜಿಸುತ್ತಿದ್ದು ಕಳೆದ ವರ್ಷದ ವರೆಗೆ 12,900 ಜೊತೆ ವಿವಾಹವಾಗಿದ್ದು, ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಅಂತರ್‌ಜಾತಿಯ ವಿವಾಹಕ್ಕೂ ಹಿರಿಯರ ಒಪ್ಪಿಗೆಯೊಂದಿಗೆ ಅವಕಾಶ ನೀಡಲಾಗು ತ್ತದೆ.ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದುವೆ ಆದವರೆಲ್ಲ ಸುಖ-ಶಾಂತಿ, ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ವರೆಗೆ ಒಂದು ಕೂಡಾ ವಿಚ್ಛೇದನ ಪ್ರಕರಣ ವರದಿಯಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಸಾಮೂಹಿಕ ವಿವಾಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು, ಅಧಿಕಾರಿಗಳು, ಉನ್ನತ ಶಿಕ್ಷಣ ಪಡೆದವರು ಮದುವೆಯಾಗುತ್ತಿರುವುದು ಸ್ತುತ್ಯಾರ್ಹವಾಗಿದೆ. ಸಾಮೂಹಿಕ ವಿವಾಹದಿಂದಾಗಿ ಅನೇಕ ಕುಟುಂಬಗಳು ಸಾಲದ ಶೂಲದಿಂದ ಪಾರಾಗಿವೆ. ಇಂದು ಎಲ್ಲರೂ ಸರಳ ವಿವಾಹಕ್ಕೆ ಆದ್ಯತೆ ನೀಡುತ್ತಿದ್ದಾರೆ.
ಅನೇಕ ದೇವಸ್ಥಾನಗಳು, ಮಠ-ಮಂದಿ ರಗಳು ಹಾಗೂ ಸೇವಾಸಂಸ್ಥೆಗಳು ಈ ಸೇವಾಕಾರ್ಯವನ್ನು ಮಾದರಿ ಎಂದು ಸ್ವೀಕರಿಸಿ ಅನೇಕ ಕಡೆಗಳಲ್ಲಿ ಸಾಮೂಹಿಕ ವಿವಾಹವನ್ನು ನಡೆಸು ತ್ತಿರುವುದು ತನಗೆ ಸಂತೋಷ ಮತ್ತು ಧನ್ಯತೆಯನ್ನು ನೀಡಿದೆ ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿಂದ ಮದುವೆಯಾಗಿ ತೆರಳಿದವರು ನಂತರ ಅನಗತ್ಯ ವಾಗಿ ಹಣ ದುಂದು ವೆಚ್ಚಮಾಡಬೇಡಿ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸಾಮೂಹಿಕ ವಿವಾಹದ ಸಂಘಟಕರಾದ ಹೇಮಾವತಿ ಹೆಗ್ಗಡೆ, ಅಮಿತ್ ಕುಮಾರ್, ಶ್ರದ್ಧಾ ಮೊದಲಾದವರು ಉಪಸ್ಥಿತರಿದ್ದರು. ಧರ್ಮ ಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ನವತಿಯಿಂದ ಡಿ.ಹರ್ಷೇಂದ್ರ ಕುಮಾರ್ ಸ್ವಾಗತಿಸಿದರು. ಡಾ.ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ಶೆಟ್ಟಿ ವಂದಿಸಿದರು.