ಮಂಗಳೂರು: ಮೀನು ವ್ಯಾಪಾರಿಗೆ ಹಲ್ಲೆ ಪ್ರಕರಣ; ನಾಲ್ಕು ಮಂದಿ ಸೆರೆ
ಮಂಗಳೂರು : ನಗರದ ದೇರೆಬೈಲ್ ಕೊಂಚಾಡಿ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಮೀನು ವ್ಯಾಪಾರಿ, ಉಳ್ಳಾಲದ ಮುಹಮ್ಮದ್ ಲುಕ್ಮಾನ್ ಎಂಬವರಿಗೆ ಹಲ್ಲೆಗೈದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಜ್ಪೆ ಕಳವಾರು ಕುರ್ಸಿಗುಡ್ಡೆ ನಿವಾಸಿ ಲಿಖಿತ್ (29), ಕುತ್ತಾರ್ ಸುಭಾಷ್ ನಗರ ನಿವಾಸಿ ರಾಕೇಶ್ (34), ಸುರತ್ಕಲ್ ನವಗ್ರಾಮ ಆಶ್ರಯ ಕಾಲನಿ ನಿವಾಸಿ ಧನರಾಜ್ ಯಾನೆ ಧನು (24), ಮೂಲತಃ ಬೆಳ್ತಂಗಡಿ ಅಂಗರಕಟ್ಟೆಯ ಪ್ರಸಕ್ತ ಬನ್ನಡ್ಕ ದರ್ಖಾಸು ನಿವಾಸಿ ಪ್ರಶಾಂತ್ ಶೆಟ್ಟಿ (26) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 2ರಂದು ಬೆಳಗ್ಗೆ 6:45ಕ್ಕೆ ದೇರೆಬೈಲ್ ಕೊಂಚಾಡಿ ಬಳಿ ಆರೋಪಿಗಳು ಕಾರಿನಲ್ಲಿ ಬಂದು ಮೀನು ವ್ಯಾಪಾರಿ ಮುಹಮ್ಮದ್ ಲುಕ್ಮಾನ್‌ರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಮುಹಮ್ಮದ್ ಲುಕ್ಮಾನ್‌ರನ್ನು ಸ್ಥಳೀಯ ಹಿಂದೂ ಮಹಿಳೆಯೊಬ್ಬರು ರಕ್ಷಿಸಿದ್ದರು. ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಕಾವೂರು ಪೊಲೀಸರು ಶನಿವಾರ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.