×
Ad

ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೊರ್ಸ್| ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಗೃಹ ಸಚಿವರ ಏಕಪಕ್ಷೀಯ ನಡೆ: ಸಂಸದ ಚೌಟ

Update: 2025-05-03 22:14 IST

ಬ್ರಿಜೇಶ್ ಚೌಟ

ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮಂಗಳೂರಿಗೆ ಭೇಟಿ ನೀಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸ್ಥಳೀಯ ಜನಪ್ರತಿನಿಧಿಗಳ ಜತೆಗೆ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯ ವಾಗಿ ನಿರ್ಧಾರ ಕೈಗೊಂಡು ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೊರ್ಸ್ ಸ್ಥಾಪನೆಯ ಘೋಷಣೆ ಮಾಡಿರುವು ದನ್ನು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಟೀಕಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆದರೆ, ಇಂಥಹ ಸೂಕ್ಷ್ಮ ವಿಚಾರದ ಬಗ್ಗೆ ಗೃಹ ಸಚಿವರು ಇಲ್ಲಿನ ಯಾವುದೇ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಲಿ ಅಥವಾ ಪರಿಸ್ಥಿತಿ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯುವ ಪ್ರಯತ್ನವನ್ನಾಗಲಿ ಮಾಡಿಲ್ಲ. ಪೊಲೀಸರ ಜತೆ ಕಾನೂನು ಸುವ್ಯವಸ್ಥೆ ಸಭೆ ನಡೆಸಿರುವ ಗೃಹ ಸಚಿವರು ಅದಕ್ಕೂ ಮುನ್ನ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಲು ಉತ್ಸಾಹ ತೋರಿದ್ದಾರೆ. ಈ ವಿಚಾರದಲ್ಲಿ ಸಚಿವರು ಜನಪ್ರತಿನಿಧಿಗಳನ್ನು ಕಡೆಗಣಿಸಿ ಏಕಪಕ್ಷೀಯ ತೀರ್ಮಾನ ಕೈಗೊಂಡಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಆ ಮೂಲಕ, ಗೃಹ ಸಚಿವರು ಈ ಪ್ರದೇಶದ ಸಂವೇದನಾಶೀಲತೆಯನ್ನು ಅರ್ಥಮಾಡಿ ಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದು, ಸ್ಥಳೀಯ ಜನರ ಭಾವನೆಗಳನ್ನು ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಕಡೆಗಣಿಸಿದಂತೆಯೇ ಸರಿ ಎಂದು ಚೌಟ ಆರೋಪಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಮೊದಲು ವೈಯಕ್ತಿಕ ದ್ವೇಷ ಮತ್ತು ಗ್ಯಾಂಗ್ ವಾರ್ ಎಂದು ಬಿಂಬಿಸಿದ್ದ ಕಾಂಗ್ರೆಸ್ ಸರಕಾರ , ಪ್ರಕರಣದ ಸತ್ಯಾಂಶ ಹೊರಬಂದ ಬಳಿಕ ಅದಕ್ಕೆ ಕೋಮು ಬಣ್ಣ ಕಟ್ಟುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಈಗ ಅವರ ನಿಲುವು ಹೇಗೆ ಬದಲಾಗಿದ್ದು? ಈಗಲಾದರೂ ಈ ಕಾಂಗ್ರೆಸ್ ಸರಕಾರವು ಸುಹಾಸ್ ಹಿಂದೂ ಆಗಿರುವುದಕ್ಕೆ ಹತ್ಯೆಯಾಗಿದೆ ಎಂದು ಬಹಿರಂಗವಾಗಿ ಹೇಳುವ ಧೈರ್ಯ ತೋರುತ್ತದೆಯೇ? ಇಂಥಹ ಗಂಭೀರ ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿಯೂ ಕೇವಲ ಒಂದು ಸಮುದಾಯವನ್ನಷ್ಟೇ ಓಲೈಸುವ ಈ ಸಿದ್ದರಾಮಯ್ಯ ಸರಕಾರದ ನಿಜವಾದ ಅಜೆಂಡಾ ಏನು? ಎಂದು ಚೌಟ ಪ್ರಶ್ನಿಸಿದ್ದಾರೆ.

ಈ ಕಾಂಗ್ರೆಸ್ ಸರ್ಕಾರವು ಕರಾವಳಿಯನ್ನು ಕೋಮು ಗಲಭೆ ಪೀಡಿತ ಎಂದು ಹಣೆಪಟ್ಟಿ ಕಟ್ಟಿ ನೈಜ ಪರಿಸ್ಥಿತಿಯನ್ನು ಎದುರಿಸುವ ಬದಲು, ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಘೋಷಿಸಿದ ‘ಕೋಮು ವಿರೋಧಿ ಕಾರ್ಯಪಡೆ’ಯು ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಪ್ರಸ್ತಾಪಿಸಿದ್ದ ವಿವಾದಾತ್ಮಕ ಕೋಮು ಹಿಂಸಾಚಾರ ಕರಡು ಮಸೂದೆಯಿಂದ ಪ್ರೇರಣೆ ಪಡೆದಂತಿದೆ ಎಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News