ಮಂಗಳೂರಿನಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ಬ್ರ್ಯಾಂಡ್ ‘ಪಾಕಶಾಲ’ ಆರಂಭ
ಮಂಗಳೂರು, ಮೇ 4: ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಹಾರಿ ರೆಸ್ಟೋರೆಂಟ್ ಬ್ರ್ಯಾಂಡ್ ‘ಪಾಕಶಾಲ’ ನಗರದ ಕೆಎಸ್‌ರಾವ್ ರಸ್ತೆಯಲ್ಲಿರುವ ಗಣೇಶ್ ಮಹಲ್‌ನಲ್ಲಿ ರವಿವಾರ ಶುಭಾರಂಭಗೊಂಡಿತು.
ಪಾಕಶಾಲದ 35ನೇ ಶಾಖೆ ಹಾಗೂ ಕರಾವಳಿಯ ನಾಲ್ಕನೇ ಔಟ್‌ಲೆಟ್‌ನ್ನು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀಲಕ್ಷ್ಮೀನಾರಾಯಣ ಅಸ್ರಣ್ಣ ಉದ್ಘಾಟಿಸಿ ಮಾತನಾಡಿ ‘‘ಶುಚಿ-ರುಚಿಯಾದ ಅಡುಗೆ ಮೂಲಕ ಯಶಸ್ಸು ಗಳಿಸಿರುವ ‘ಪಾಕಶಾಲ ’ ಮಂಗಳೂರಿನಲ್ಲಿ ಆರಂಭಗೊಂಡಿದೆ. ತಾನು ಬದುಕಬೇಕು ಇನ್ನೊಬ್ಬರನ್ನು ಬದುಕಲು ನೆರವಾಗಬೇಕು ಎಂಬ ಸೇವಾ ಮನೋಭಾವವನ್ನು ಹೊಂದಿರುವ ಪಾಕಶಾಲದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್.ವಾಸುದೇವ ಅಡಿಗರು ತಮ್ಮ ಸಂಸ್ಥೆಗಳಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೀಡಿದ್ದಾರೆ. ಅಷ್ಟು ಮಂದಿಯ ಕುಟುಂಬಕ್ಕೆ ಅವರು ಆಸರೆಯಾಗಿದ್ದಾರೆ. ಇದು ಅವರ ಗ್ರಾಹಕ ಸ್ನೇಹಿ ವ್ಯವಸ್ಥೆ ಮತ್ತು ಬದ್ಧತೆಗೆ ದೊರೆತ ಪ್ರತಿಫಲವಾಗಿದೆ. ಈ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಶಾಸಕ ವೇದವ್ಯಾಸ ಕಾಮತ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಮಂಗಳೂರಿನಲ್ಲಿ ನೂರು ವರ್ಷ ಪೂರೈಸಿರುವ ಆನೇಕ ಹೋಟೆಲ್‌ಗಳಿವೆ. ಮಂಗಳೂರು ಮೂಲದ ಅನೇಕ ಹೋಟೆಲ್‌ಗಳು ಜಗತ್ತಿನಾದ್ಯಂತ ಇವೆ. ಇದೀಗ ದೇಶವಿದೇಶಗಳಲ್ಲಿ ಖ್ಯಾತಿಯನ್ನು ಗಳಿಸಿರುವ ಪಾಕಶಾಲದ ಪ್ರವೇಶ ಆಗಿದೆ. ಹೋಟೆಲ್ ಉದ್ಯಮ ನಡೆಸುವುದು ಇವತ್ತು ಕಷ್ಟದ ಕೆಲಸ, ಸರ್ವಿಸ್ ಓರಿಯೆಂಟೆಡ್ ಉದ್ಯಮ ಸವಾಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಶಾಲ ಎಲ್ಲವನ್ನು ನಿಭಾಯಿಸಿಕೊಂಡು ಬೆಳೆಯುತ್ತಿದೆ. ತನ್ನ ಶಾಖೆಗಳನ್ನೂ ದೇಶಾದ್ಯಂತ ವಿಸ್ತರಿಸುತ್ತಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷ ಕುಡ್ಪಿ ಜಗದೀಶ ಶಣೈ, ಶಾರದಾ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್, ಎ.ಜೆ. ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಮೆಡಿಕಲ್ ಡೈರೆಕ್ಟರ್ ಡಾ. ಪ್ರಶಾಂತ್ ಮಾರ್ಲ, ಕಟ್ಟಡದ ಪಾಲುದಾರ ಎಲ್.ನರಸಿಂಹ ಮೂರ್ತಿ ಮುಖ್ಯ ಅತಿಥಿ ಯಾಗಿ ಶುಭ ಹಾರೈಸಿದರು.
ಸಂಘಟಕ ಸುಧಾಕರ ರಾವ್ ಪೇಜಾವರ, ಪಾಕಶಾಲ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಬಿಜು ಥಾಮಸ್ ಉಪಸ್ಥಿತರಿದ್ದರು.
ಪಾಕಶಾಲ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಎನ್,ವಾಸುದೇವ ಅಡಿಗ ಸ್ವಾಗತಿಸಿದರು. ನಿರ್ದೇಶಕಿ ವೈಜಯಂತಿ ಅಡಿಗ ವಂದಿಸಿದರು. ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
*ಪಾಕಶಾಲದ ಬಗ್ಗೆ: ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಬ್ರ್ಯಾಂಡ್ ಪಾಕಶಾಲ ಕೆಎಸ್ ರಾವ್ ರಸ್ತೆಯ ಗಣೇಶ್ ಮಹಲ್‌ನಲ್ಲಿ ತನ್ನ ಮಂಗಳೂರು ಔಟ್‌ಲೆಟ್‌ಅನ್ನು ಪ್ರಾರಂಭಿದೆ. ಇದು ಕರ್ನಾಟಕದ ಅಭಿವೃದ್ಧಿ ಹೊಂದುತ್ತಿರುವ ಕರಾವಳಿಯಲ್ಲಿ ಪಾಕಶಾಲಾದ 4ನೇ ಔಟ್‌ಲೆಟ್ ಆಗಿರುತ್ತದೆ. ಉಳಿದ ಮೂರು ಔಟ್‌ಲೇಟ್‌ಗಳು ಉಡುಪಿ, ಕುಂಭಾಶಿ, ಮುರುಡೇಶ್ವರದಲ್ಲಿವೆ.
ಮಂಗಳೂರಿನ ಪಾಕಶಾಲದ ಹೊಸ ಔಟ್‌ಲೆಟ್‌ನಲ್ಲಿ ಮಂಗಳೂರಿನ ಜನರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿ ಗಳಿಗೆ ರುಚಿಯಾದ ಸಸ್ಯಾಹಾರಿ ಭಕ್ಷ್ಯಗಳನ್ನು ಸವಿಯಲು ವಿಶಾಲವಾದ ಸ್ಥಳಾವಕಾಶವನ್ನು ಒದಗಿಸುವು ದರ ಜೊತೆಗೆ ಫ್ಯಾಮಿಲಿ ಸಮ್ಮೀಳನ, ಇವೆಂಟ್ಸ್ ಮತ್ತು ಶುಭ ಸಮಾರಂಭಗಳನ್ನು ಆಚರಿಸಲು ವಿಶಾಲ ವಾದ, ಹವಾನಿಯಂತ್ರಿತ ಡೈನಿಂಗ್ ಹಾಲ್ ಮತ್ತು ಸುಸಜ್ಜಿತ ಪಾರ್ಟಿ ಹಾಲ್‌ನ ಸೌಲಭ್ಯವಿದೆ.
1960ರಲ್ಲಿ ಕೆ.ಎನ್. ವಾಸುದೇವ ಅಡಿಗರ ತಂದೆಯವರಾದ ಕುಂದಾಪುರ-ಶಂಕರನಾರಾಯಣದ ಕೆಎನ್ ನಾಗೇಶ್ವರ ಅಡಿಗ ಮತ್ತು ಕೆಎನ್ ಸರಸ್ವತಿ ಇವರು ಬೆಂಗಳೂರಿನಲ್ಲಿ ಬ್ರಾಹ್ಮಣರ ಕಾಫಿ ಬಾರ್ ಅನ್ನು ಸ್ಥಾಪಿಸಿದರು. ಇದು ಸರಳತೆ, ಶುಚಿ-ರುಚಿಗೆ ಹೆಸರುವಾಸಿಯಾಗಿ ತಲೆಮಾರುಗಳವರೆಗೆ ವ್ಯಾಪಿಸಿತ್ತು. ಅವರ ಪುತ್ರ ಇಂಜಿನಿಯರಿಂಗ್ ಪದವೀಧರ ಕುಂದಾಪುರದ ಕೆ.ಎನ್. ವಾಸುದೇವ ಅಡಿಗರು ಬಿ 1993ರಲ್ಲಿ ವಾಸುದೇವ ಅಡಿಗಾಸ್ ಬ್ರ್ಯಾಂಡ್ ಪ್ರಾರಂಭಿಸಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡರು.
*2018ರಲ್ಲಿ ಪಾಕಶಾಲ ಉದಯ : ವಾಸುದೇವ ಅಡಿಗ ಅವರು 2018ರಲ್ಲಿ ಸಂಪೂರ್ಣವಾಗಿ ಹೊಸ ಮತ್ತು ಸ್ವತಂತ್ರ ಉದ್ಯಮವನ್ನು ಪಾಕಶಾಲಾದ ಮೂಲಕ ಆರಂಭಿಸಿದರು. ಕೇವಲ ಏಳು ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ 30ಕ್ಕೂ ಅಧಿಕ ಔಟ್‌ಲೆಟ್‌ಗಳನ್ನು ಪ್ರಾರಂಭಿಸಿದರು. ಪಾಕಶಾಲಾದ ಔಟ್‌ಲೆಟ್‌ಗಳಲ್ಲಿ ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್, ಕಾಂಟಿನೆಂಟಲ್ ಮತ್ತು ಚಾಟ್ಸ್‌ನಂತಹ 325 ಕ್ಕೂ ಹೆಚ್ಚು ಸಸ್ಯಾಹಾರಿ ಭಕ್ಷ್ಯಗಳನ್ನು ಒದಗಿಸುತ್ತದೆ. ‘ಪಾಕಶಾಲ’ದ ರವೆ ಇಡ್ಲಿ, ಮಸಾಲೆ ದೋಸೆ, ಕಾಫಿ, ಸಾಂಬಾರು ಫೇಮಸ್ ಆಗಿದೆ.
ಮುಂದಿನ ಯೋಜನೆ: ಮೈಸೂರು, ಕನಕಪುರ, ಮಂಡ್ಯ, ದಾವಣಗೆರೆ, ಗ್ರೇಟರ್‌ಕೈಲಾಶ್, ಹೊಸದಿಲ್ಲಿ , ಚೆಂಡೂರು (ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ) ಮುಂದೆ ಔಟ್‌ಲೆಟ್‌ನ್ನು ಪ್ರಾರಂಭಿಸಲಿದ್ದು, ಪ್ರತಿಯೊಂದು ಹೊಸ ಶಾಖೆಯು ಬ್ರ್ಯಾಂಡ್‌ನ ಭರವಸೆಗೆ ಬದ್ಧವಾಗಿದೆ. ಆರೋಗ್ಯಕರ, ಸಾಂಪ್ರದಾಯಿಕ ಸಸ್ಯಾಹಾರಿ ಪಾಕಪದ್ಧತಿಯನ್ನು ಶುದ್ಧ, ಆಧುನಿಕ ಮತ್ತು ಕುಟುಂಬ-ಸ್ನೇಹಿ ವಾತಾವರಣದಲ್ಲಿ ತಲುಪಿಸಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.