ಪ್ರತ್ಯೇಕವಾಗಿ ಮುಸ್ಲಿಂ ಸಮುದಾಯದ ಸಭೆಯನ್ನು ಕರೆದಿರಲಿಲ್ಲ: ಸಚಿವದ್ವಯರ ಸ್ಪಷ್ಟನೆ
ಜಿ. ಪರಮೇಶ್ವರ್ - ದಿನೇಶ್ ಗುಂಡೂರಾವ್
ಮಂಗಳೂರು, ಮೇ 4: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆಗಳ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಕುರಿತಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮೇ3 ರಂದು ಮಂಗಳೂರಿಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ.
ಆದರೆ ಕೆಲವು ಮಾಧ್ಯಮಗಳಲ್ಲಿ ಸಚಿವರು ಕೇವಲ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಮಾತ್ರ ಸಭೆ ನಡೆಸಿದ್ದಾರೆ ಎಂದು ತಪ್ಪಾಗಿ ವರದಿಯಾಗಿದೆ. ಈ ಮೂಲಕ ಸ್ಪಷ್ಟಪಡಿಸುವುದೆನೆಂದರೆ ಗೃಹ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಯಾವುದೇ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿಲ್ಲ. ಅಲ್ಲದೇ ಪ್ರತ್ಯೇಕವಾಗಿ ಮುಸ್ಲಿಂ ಸಮುದಾಯದ ಸಭೆಯನ್ನೂ ಕರೆದಿರಲಿಲ್ಲ ಎಂದು ಸಚಿವದ್ವಯರು ಸ್ಪಷ್ಟಪಡಿಸಿದ್ದಾರೆ.
ಕಠಿಣ ಕಾನೂನು ಕ್ರಮಗಳನ್ನ ಕೈಗೊಳ್ಳುವ ಕುರಿತಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಮಾತ್ರ ಸಭೆ ನಡೆಸಲಾಗಿದೆ. ಸರ್ಕ್ಯೂಟ್ ಹೌಸ್‌ನಲ್ಲಿ ಇದ್ದ ವೇಳೆ ಮುಸ್ಲಿಂ ಸೇರಿದಂತೆ ಇತರ ಸಮುದಾಯದ ಹಾಗೂ ಸಂಘ ಸಂಸ್ಥೆಗಳ ಮುಖಂಡರ ನಿಯೋಗ ಭೇಟಿ ನೀಡಿತ್ತು. ನಿಯೋಗದ ಅಹವಾಲುಗಳನ್ನು ಆಲಿಸಲಾಗಿದೆ ಹೊರತಾಗಿ ಪೊಲೀಸರ ಸಮಕ್ಷಮದಲ್ಲಿ ಮುಸ್ಲಿಂ ಮುಖಂಡರ ಜೊತೆ ಯಾವುದೇ ಸಭೆ ನಡೆಸಿಲ್ಲ. ಬೆಳಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಇಬ್ಬರು ಸಚಿವರು ಸರ್ಕ್ಯೂಟ್ ಹೌಸ್‌ನಲ್ಲಿ ತಂಗಿದ್ದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರುಗಳಿಗೆ ಭೇಟಿ ನೀಡಲು ಅವಕಾಶವಿತ್ತು. ಮೇಲೆ ತಿಳಿಸಲಾದ ನಿಯೋಗದ ಹೊರತಾಗಿ, ಬೇರೆ ಇತರ ಮುಖಂಡರು ಹಾಗೂ ನಿಯೋಗಗಳಿಗೆ ಸಚಿವರನ್ನು ಭೇಟಿ ಮಾಡಲು ಸಮಯವಕಾಶವಿತ್ತು.
ಯಾವುದೇ ಒಂದು ಸಮುದಾಯವನ್ನು ಒಲೈಸುವ ಪ್ರಶ್ನೆಯಿಲ್ಲ. ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಚಿವರು ಕೇವಲ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ ಎಂಬ ರೀತಿಯ ತಪ್ಪು ಸಂದೇಶಗಳನ್ನು ರವಾನಿಸುವುದು ಸರಿಯಲ್ಲ ಎಂದು ಪ್ರಕಟನೆ ತಿಳಿಸಿದೆ.