ಪೊಲೀಸ್ ಕಾನ್‌ಸ್ಟೇಬಲ್ ಮೇಲಿನ ಆರೋಪ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ: ಡಿವೈಎಫ್‌ಐ
ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ನಡೆದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಸೆ.144 ನಿಷೇಧಾಜ್ಞೆ ವಿಧಿಸಿದ್ದರೂ ಕೂಡ ಸಂಘಪರಿವಾರ ಶವ ಮೆರವಣೆಗೆ ನಡೆಸಿದೆ. ಪ್ರಚೋದನಕಾರಿ ಹೇಳಿಕೆ ನೀಡಿ ದ.ಕ. ಜಿಲ್ಲೆಯ ಬಂದ್‌ಗೆ ಕರೆ ನೀಡಿದ್ದ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್‌ನನ್ನು ಪೊಲೀಸರು ಬಂಧಿಸಬೇಕು ಎಂದು ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ಸಂಘಪರಿವಾರ, ಬಿಜೆಪಿ ಪಕ್ಷದ ಮುಖಂಡರು, ಶಾಸಕರು ದ.ಕ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋಮು ಪ್ರಚೋದಿತ, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಿಂದಿಸುವಂತಹ ಉದ್ರೇಕಕಾರಿ ಭಾಷಣವನ್ನು ಮಾಡುತ್ತಿದ್ದರೂ ಕೂಡ ಪೊಲೀಸ್ ಇಲಾಖೆ ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಪೊಲೀಸರು ಹೆಸರಿಗಷ್ಟೇ ಕೇಸು ದಾಖಲಿಸುತ್ತಾರೆಯೇ ವಿನಃ ಬಂಧಿಸುತ್ತಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈಗಾಗಲೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ನಡೆದ ನಂತರ ಜಿಲ್ಲೆಯಲ್ಲಿ ಸಂಘವಾರ ಸೃಷ್ಟಿಸಿದ ಪ್ರಕ್ಷುಬ್ದ ಆತಂಕಮಯ ವಾತಾವರಣದಿಂದ ಕಣ್ಣೂರು, ಕುಂಟಿಕಾನ, ತೊಕ್ಕೊಟ್ಟು ಭಾಗಗಳಲ್ಲಿ ಅಮಾಯಕ ಮುಸ್ಲಿಂ ಯುವಕರ ಹತ್ಯೆಗೆ ಯತ್ನದಂತಹ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ಪಂಜಿಮೊಗರು ಮತ್ತಿತರ ಭಾಗಗಳಲ್ಲಿ ಬಹಿರಂಗವಾಗಿ ತಲವಾರು, ಮಾರಕಾಯುಧಗಳನ್ನು ತೋರಿಸುತ್ತಾ ಕೊಲೆ ಬೆದರಿಕೆಗಳನ್ನು ಒಡ್ಡಿರುವ ಘಟನೆಗಳಿಗೆ ಸಂಬಂಧಿಸಿ ಸ್ಥಳೀಯ ಠಾಣೆಗಳಲ್ಲಿ ದೂರು ನೀಡಲಾಗಿದೆ. ಈ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು ಎಂದು ಡಿವೈಎಫ್‌ಐ ಒತ್ತಾಯಿಸಿದೆ.
ಸುಹಾಸ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಘಪರಿವಾರ ದಿನಕ್ಕೊಂದು ಸುಳ್ಳು ಆರೋಪಗಳನ್ನು ಹೊರಿಸಿ ಧರ್ಮಗಳ ನಡುವೆ ಪರಸ್ಪರ ಅಪನಂಬಿಕೆ ಸೃಷ್ಟಿಸುವ ವಾತಾವರಣ ಸೃಷ್ಟಿಸುತ್ತದೆ. ಬಜ್ಪೆಪೊಲೀಸ್ ಠಾಣೆಯ ಪೇದೆಯೊಬ್ಬರು ಮುಸ್ಲಿಂ ಎನ್ನುವ ಕಾರಣಕ್ಕೆ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಸಮಾಜದಲ್ಲಿ ದ್ವೇಷ ಹರಡುವಂತೆ ಸಂಘಪರಿವಾರ ಯತ್ನಿಸುತ್ತಿವೆ. ಅದೇ ರೀತಿ ನಗರದ ಪೊಲೀಸ್ ಇಲಾಖೆ ಮತ್ತು ಕಮಿಷನರ್ ಶಾಮೀಲಾತಿ ಬಗ್ಗೆ ಬಿಜೆಪಿ ಶಾಸಕರೂ ಕೂಡ ಆರೋಪಗಳನ್ನು ಹೊರಿಸುತ್ತಿರುವುದು ಖಂಡನೀಯ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದ್ದಾರೆ.