ಜಮೀನು ಪೋಡಿ| ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ: ಡಿಸಿ ಮುಲ್ಲೈ ಮುಗಿಲನ್ ಎಚ್ಚರಿಕೆ
ಮಂಗಳೂರು: ದರಖಾಸ್ತು ಪೋಡಿ ಮಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ವಿಶೇಷ ಆಂದೋಲನ ಕಾರ್ಯಕ್ರಮದಲ್ಲಿ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ಹಾಗೂ ಸರ್ವೇಯರ್‌ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಎಚ್ಚರಿಸಿದರು.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಎಲ್ಲಾ ತಾಲೂಕುಗಳ ತಹಶೀಲ್ದಾರ್, ಸರ್ವೇ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ವಿಶೇಷ ಆಂದೋಲನದ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.
ಒಂದು ಸರ್ವೇ ನಂಬರ್‌ನ ಎಲ್ಲಾ ಮಂಜೂರುದಾರರಿಗೆ ಏಕಕಾಲದಲ್ಲಿ ಜಮೀನಿನ ಅಳತೆ ಮಾಡಿ ಪೋಡಿ ಮಾಡುವ ಉದ್ದೇಶದಿಂದ ಕಂದಾಯ ಇಲಾಖೆಯಿಂದ ನಮೂನೆ 1-5ವರೆಗಿನ ಮಾಹಿತಿಯನ್ನು ಸಿದ್ಧಪಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಸಾಫ್ಟ್‌ವೇರ್ ಸಿದ್ಧಪಡಿಸಲಾಗಿದೆ. ಎಲ್ಲಾ ದರಖಾಸ್ತು ಪೋಡಿ ಪ್ರಕರಣಗಳು ಆನ್‌ಲೈನ್ ಮೂಲಕವೇ ನಿರ್ವಹಿಸಬೇಕಿದೆ ಎಂದು ಹೇಳಿದರು.
ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಈ ವಿಶೇಷ ಆಂದೋಲನದಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ಆಯಾಯ ತಹಶೀಲ್ದಾರ್ ಮತ್ತು ಸರ್ವೆ ಅಧಿಕಾರಿಗಳು ಮುತುವರ್ಜಿ ವಹಿಸಿ ಆದ್ಯತೆಯಲ್ಲಿ ನಮೂನೆ 1-5 ಪ್ರಕರಣವನ್ನು ವಿಲೇವಾರಿ ಮಾಡಬೇಕು ಎಂದು ಡಿಸಿ ಹೇಳಿದರು.
ಈ ಅಭಿಯಾನದಲ್ಲಿ ನಿರ್ಲಕ್ಷ್ಯ ವಹಿಸುವ ಸಿಬ್ಬಂದಿ ಮತ್ತು ಸರ್ವೆಯರ್‌ಗಳನ್ನು ಅಮಾನತುಗೊಳಿಸುವು ದಾಗಿ ಎಚ್ಚರಿಸಿದ ಡಿಸಿ, ಜಮೀನು ಸರ್ವೆಗೆ ನಿರ್ಲಕ್ಷ್ಯ ವಸುವ ಸರ್ವೆಯರ್‌ಗಳ ಲೈಸೆನ್ಸ್ ರದ್ದುಗೊಳಿಸಲು ಶಿಫಾರಸ್ಸು ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.
ಎಲ್ಲಾ ತಹಶೀಲ್ದಾರ್ ಮತ್ತು ಸರ್ವೆ ಅಧಿಕಾರಿಗಳು ತಮ್ಮಲ್ಲಿರುವ ದರಖಾಸ್ತು ಪೋಡಿ ಪ್ರಕರಣಗಳನ್ನು ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಲು ಕಾರ್ಯಪ್ರವೃತ್ತರಾಗಬೇಕು ಎಂದು ಡಿಸಿ ಕಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್, ಉಪ ವಿಭಾಗಾಧಿಕಾರಿ, ತಹಶೀಲ್ದಾರ್‌ಗಳು, ಭೂ ದಾಖಲೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.