×
Ad

ಮಂಗಳೂರು ವಿವಿ: ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟನೆ

Update: 2025-05-07 19:41 IST

ಕೊಣಾಜೆ: ಭಾಷೆ ಮತ್ತು ಬರವಣಿಗೆ ಮಾಧ್ಯಮ ಉದ್ಯೋಗಾಕಾಂಕ್ಷಿಗಳ ಎರಡು ಅಸ್ತ್ರಗಳಾಗಿವೆ. ಭಾಷೆ ನಮ್ಮ ಬಲ,‌ಮಾತು ನಮ್ಮ ಆಯುಧ. ಬರವಣಿಗೆ ಮತ್ತು ಗ್ರಹಿಕೆಯ ಸೂಕ್ಷ್ಮತೆಯನ್ನು ಅರಿಯದವರು ಮಾಧ್ಯಮ ಕ್ಷೇತ್ರದಲ್ಲಿ ಎಂದಿಗೂ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾ ನಿಲಯದ ಕುಲಪತಿಗಳಾಗಿರುವ ಪ್ರೊ. ನಿರಂಜನ ವಾನಳ್ಳಿ ಅವರು ಹೇಳಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯ (ಪಿ ಎಂ ಉಷಾ) ಪ್ರಾಯೋಜಕತ್ವದಲ್ಲಿ ವಿಶ್ವವಿದ್ಯಾ ನಿಲಯದ ಡಾ. ಯು ಆರ್ ರಾವ್ ಸಭಾಂಗಣದಲ್ಲಿ 'ಕನ್ನಡ ಮಾಧ್ಯಮ ಕ್ಷೇತ್ರ-ಅವಕಾಶಗಳು ಮತ್ತು ಕೌಶಲಗಳು' ಎಂಬ ವಿಷಯಾಧಾರಿತವಾಗಿ ಮೂರು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಬೇಕೆನ್ನುವವರಿಗೆ ಕೌಶಲ ಮಾತ್ರವಲ್ಲ ಮೌಲ್ಯಗಳತ್ತನೂ ಗಮನ ಅಗತ್ಯ. ಪತ್ರಿಕೋದ್ಯಮ, ಮಾಧ್ಯಮ ಕ್ಷೇತ್ರವು ಇಂದು ವಿಸ್ತಾರವಾಗಿ ಬೆಳೆದು ವಿಪುಲ ಅವಕಾಶಗಳನ್ನು ಸೃಷ್ಟಿಸಿ ದ್ದರೂ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಇಂದು ಮಾಧ್ಯಮ ಶಿಕ್ಷಣ ಪತ್ರಿಕೆ, ರೇಡಿಯೊ, ಟಿವಿಗೆ ಸೀಮಿತ ಅಲ್ಲ. ಈವೆಂಟ್ ಮ್ಯಾನೇಜ್ಮೆಂಟ್, ಜಾಹೀರಾತು, ಸಾರ್ವಜನಿಕ ಸಂಪರ್ಕಗಳು ಮೊದಲಾದ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡು, ವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ ಎಂದರು.

ಮಂಗಳೂರು ವಿವಿ ಕುಲಸಚಿವ ಕೆ. ರಾಜು‌ ಮೊಗವೀರ ಅವರು ಮಾತನಾಡಿ, ಪತ್ರಕರ್ತರು ಸಮಕಾಲೀನ ಇತಿಹಾಸಕಾರರು. ಸತ್ಯ, ಸ್ಪಷ್ಟತೆ, ಸಾಮಾಜಿಕ ಜವಾಬ್ದಾರಿಯ ಅರಿವು ಅಗತ್ಯ. ಸಾಮಾಜಿಕ ಸ್ವಾಸ್ಥ್ಯ ವನ್ನು ಕಾಪಾಡುವ ಜವಬ್ಧಾರಿ ಪತ್ರಕರ್ತರಿಗೆ ಇರುತ್ತದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿರುವ ಪ್ರೊ. ಪಿ. ಎಲ್. ಧರ್ಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಭಾಷೆಯ ಮೇಲಿನ ಪ್ರೀತಿ ಬಹಳ ಮುಖ್ಯ ಮತ್ತು ಭಾಷೆಯ ಸತ್ವವನ್ನು ನಾವು ಅರಿತಿರಬೇಕು.‌ ಭಾಷೆ ಬಳಸದಿದ್ರೆ ಕೌಶಲ್ಯ ಬೆಳೆಯಲು ಸಾಧ್ಯವಿಲ್ಲ ಎಂದರು.

ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು. ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ಸ್ವಾಗತಿಸಿದರು. ಸಂಚಾಲಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಡಾ.ಯಶು ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಾಗಾರದ ಮೊದಲ ದಿನ ಪ್ರೊ. ನಿರಂಜನ ವಾನಳ್ಳಿ ಇವರು 'ನುಡಿಚಿತ್ರ ಸ್ವರೂಪ ಮತ್ತು ಬರವಣಿಗೆ ಎಂಬ ವಿಷಯದಲ್ಲಿ , ಅಂಕಣಕಾರರು ಮತ್ತು ವಿಶ್ರಾಂತ ಪ್ರಾಧ್ಯಾಪಕರಾಗಿರುವ ಡಾ. ನರೇಂದ್ರ ರೈ ದೇರ್ಲ, 'ಬರವಣಿಗೆಯ ಭಾಷೆ ಮತ್ತು ಸಂವೇದನೆ' ಬಗ್ಗೆ, ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ಪತ್ರಿಕಾ ಛಾಯಾಗ್ರಹಣ-ಇಂದಿನ ಸವಾಲುಗಳು' ಎಂಬ ವಿಷಯದಲ್ಲಿ ಹಾಗೂ 'ಪುಸ್ತಕ ಪ್ರಕಾಶನ ಸೌಲಭ್ಯ ಮತ್ತು ಸವಾಲುಗಳು' ಎಂಬ ವಿಷಯದಲ್ಲಿ ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ಅವರು ಮಾತನಾಡಿದರು.

"ಇಂದು ಸಾಮಾಜಿಕ ಮಾಧ್ಯಮಗಳ ಕಾಲ. ಖಾಯುಂ ಸುದ್ದಿ ಮಾಧ್ಯಮಗಳಿಗಿಂತ ಯೂಟ್ಯೂಬರ್ ಗಳ ಬಳಕೆಯ ವೇಗ ಹೆಚ್ಚಾಗುತ್ತಿದೆ. ಮಾಧ್ಯಮ ಶಿಕ್ಷಣದೊಂದಿಗೆ ಟಿ.ವಿ.ಪತ್ರಿಕೆಗಳಲ್ಲಿ ಮಾತ್ರವಲ್ಲ ಸ್ವಂತವಾಗಿ ಬೆಳೆಯಬಹುದು. ಮಾಧ್ಯಮ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ".

-ಪ್ರೊ. ನಿರಂಜನ ವಾನಳ್ಳಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News