ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ಶೀಘ್ರ ಜಾರಿಯಾಗಲಿ: ಎಸ್‌ವೈಎಸ್ ದ.ಕ.ಜಿಲ್ಲಾ ಸಮಿತಿ ಒತ್ತಾಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನನಿತ್ಯ ಹೆಚ್ಚುತ್ತಿರುವ ಕೋಮು ದ್ವೇಷ ಭಾಷಣಗಳು, ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುವಂತೆ ಹೇಳಿಕೆ ಕೊಟ್ಟು ರಾಜಕೀಯ ಲಾಭ ಪಡೆಯಲು ಹವಣಿಸುತ್ತಿರುವ ಜನಪ್ರತಿನಿಧಿಗಳು, ಅಮಾಯಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ, ವಿನಾಕಾರಣ ಜಿಲ್ಲೆಯಲ್ಲಿ ಬಂದ್‌ಗೆ ಕರೆ ನೀಡಿ ಸಾರ್ವಜನಿಕ ಆಸ್ತಿ ಪಾಸ್ತಿ ಗಳಿಗೆ ಹಾನಿಮಾಡುವವರು , ಕೊಲೆ ನಡೆಸಲು ಯುವಕರನ್ನು ಪ್ರಚೋದಿಸುತ್ತಿರುವವರು ಹೆಚ್ಚಾಗುತ್ತಲೇ ಇದ್ದು, ಅಂತವರನ್ನು ಹತೋಟಿಯಲ್ಲಿಡಲು ಮುಖ್ಯಮಂತ್ರಿಯವರು ಮಧ್ಯ ಪ್ರವೇಶಿಸಬೇಕೆಂದು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮೆಹಬೂಬ್ ಸಖಾಫಿ ಕಿನ್ಯ ಒತ್ತಾಯಿಸಿದರು.
ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾ ಸಮಿತಿಯು ಆಯೋಜಿಸಿದ್ದ ‘ಸೌಹಾರ್ದತೆಗಾಗಿ ಅಂಚೆ ಕಾರ್ಡ್ ಚಳುವಳಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜಿಲ್ಲಾ ಸೋಷಿಯಲ್ ಉಪಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್‌ಪದವು ಮಾತನಾಡಿ, ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮಗಳಾಗುತ್ತಿಲ್ಲ ಎಂದರು.
ಜಿಲ್ಲಾ ಸಂಘಟನಾ ಉಪಾಧ್ಯಕ್ಷ ತೌಸೀಫ್ ಸಅದಿ ಹರೇಕಳ ಮಾತನಾಡಿ, ಈ ಸರಕಾರ ಬಂದ ಪ್ರಾರಂಭ ದಲ್ಲಿ ಸಮಾಜ ಘಾತುಕರನ್ನು ಮಟ್ಟ ಹಾಕಲು ಆ್ಯಂಟಿ ಕಮ್ಯೂನಲ್ ವಿಂಗ್‌ನ್ನು ಗ್ರಹ ಸಚಿವರು ಘೋಷಣೆ ಮಾಡಿದ್ದರೂ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಈಗ ಮತ್ತೊಮ್ಮೆ ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸನ್ನು ರಚನೆ ಮಾಡುತ್ತೇವೆಂದು ಘೋಷಿಸಿದ್ದು ಸ್ವಾಗತಾರ್ಹ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮಾತನಾಡಿ, ಜಿಲ್ಲೆಯ ಸೌಹಾರ್ದ ಪರಂಪರೆಗೆ ಕಳಂಕವನ್ನುಂಟುಮಾಡುವ ಪ್ರಯತ್ನ ನಡೆಯುತ್ತಿದ್ದು, ‘ಸೌಹಾರ್ದತೆಗಾಗಿ ಅಂಚೆ ಕಾರ್ಡ್ ಚಳುವಳಿ’ಯು ಯಶಸ್ಸು ಕಂಡಿದೆ ಎಂದು ಹೇಳಿದರು.
ಮನವಿ ಸಲ್ಲಿಕೆ: ದ.ಕ ಜಿಲ್ಲಾ ಅಪರ ಜಿಲ್ಲಾಧಿಕಾರಿ ಜಿ. ಸಂತೋಷ್ ಕುಮಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಆ್ಯಂಟಿ ಕ್ಯಮುನಲ್ ಟಾಸ್ಕ್‌ಫೋರ್ಸ್‌ನ್ನು ಎಸ್‌ವೈಎಸ್ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಜಿಲ್ಲಾ ನಾಯಕರಾದ ಉಮರ್ ಮದನಿ ಬೋಳಿಯಾರ್, ಹಕೀಂ ಪೂಮಣ್ಣು ಉಪಸ್ಥಿತರಿದ್ದರು.