×
Ad

ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ | ಇಂಡಿಜೆನ್ ಲ್ಯಾಬ್ಸ್ ನ ಸಂಸ್ಥಾಪಕ ಪದ್ಮನಾಭನ್ ದೇಸಿಕಾಚಾರಿಯಿಂದ ಪೋರ್ಟೆಬಲ್ ಅಲ್ಟ್ರಾಸೌಂಡ್ ಯಂತ್ರ ಕೊಡುಗೆ

Update: 2025-05-07 23:44 IST

ಮಂಗಳೂರು: ಇಂಡಿಜೆನ್ ಲ್ಯಾಬ್ಸ್ ನ ಸಂಸ್ಥಾಪಕ ಹಾಗೂ ಆ್ಯಪ್ ನಾಮಿಕ್ ಸಿಸ್ಟಮ್ಸ್ ನ ಅಧ್ಯಕ್ಷ ಪದ್ಮನಾಭನ್ ದೇಸಿಕಾಚಾರಿ ಅವರು ಯೆನೆಪೊಯ ವೈದ್ಯಕೀಯ ಕಾಲೇಜಿನ ಭಾಗವಾದ ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ಅತ್ಯಾಧುನಿಕ ಪೋರ್ಟೆಬಲ್ ಅಲ್ಟ್ರಾಸೌಂಡ್ ಯಂತ್ರವನ್ನು ಕೊಡುಗೆ ನೀಡಿದ್ದಾರೆ.

ಈ ಪೋರ್ಟೆಬಲ್ ಅಲ್ಟ್ರಾಸೌಂಡ್ ಯಂತ್ರದ ಹಸ್ತಾಂತರ ಕಾರ್ಯಕ್ರಮವು ಕುಲಪತಿ ಡಾ. ಫರ್ಹಾದ್ ಯೆನೆಪೊಯ, ಸ್ವಾಯತ್ತ ವಿಶ್ವವಿದ್ಯಾಲಯವಾದ ಯೆನೆಪೊಯದ ಉಪ ಕುಲಪತಿ ಡಾ. ಎಂ.ವಿಜಯ ಕುಮಾರ್ ಉಪಸ್ಥಿತಿಯಲ್ಲಿ ನೆರವೇರಿತು. ಈ ವೇಳೆ, ಇಂಡಿಜೆನ್ ಲ್ಯಾಬ್ಸ್ ನ ಉಪಾಧ್ಯಕ್ಷೆ ಪ್ರೀತಿ ಸಿಂಗ್, ಯೆನೆಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರಹಮಾನ್ ಎ.ಎ., ಯೆನೆಪೊಯ ಆಸ್ಪತ್ರೆಯಲ್ಲಿ ಅರೆಕಾಲಿಕ ಕ್ಷಕಿರಣ ತಜ್ಞರಾಗಿರುವ ವಿ.ಸತೀಶ್ ಹಾಗೂ ಇನ್ನಿತರ ಗಣ್ಯ ಅತಿಥಿಗಳೂ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಯೆನೆಪೊಯ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ಫರ್ಹಾದ್ ಯೆನೆಪೊಯ, “ಪದ್ಮನಾಭ್ ದೇಸಿಕಾಚಾರಿಯವರ ಕೊಡುಗೆಗೆ ನಾವು ಧನ್ಯವಾದ ಸಲ್ಲಿಸಲು ಬಯಸುತ್ತೇವೆ. ಈ ಪೋರ್ಟೆಬಲ್ ಅಲ್ಟ್ರಾಸೌಂಡ್ ಯಂತ್ರವು ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಗೆ ಬೆಲೆಬಾಳುವ ಕೊಡುಗೆಯಾಗಿದ್ದು, ಇದರಿಂದಾಗಿ, ನಮ್ಮ ವೈದ್ಯಕೀಯ ವೃತ್ತಿಪರರಿಗೆ ಸುಧಾರಿತ ರೋಗ ಲಕ್ಷಣ ಪತ್ತೆ ಸೇವೆಗಳನ್ನು ಒದಗಿಸಲು ನೆರವು ದೊರೆಯಲಿದೆ. ನಮ್ಮ ರೋಗಿಗಳಿಗೆ ಸಹಾನುಭೂತಿಯ ಆರೈಕೆ ಹಾಗೂ ಅಗ್ಗದ ದರದ ಚಿಕಿತ್ಸೆ ನೀಡಬೇಕು ಎಂಬ ನಮ್ಮ ಯೋಜನೆಯೊಂದಿಗೆ ಈ ಕೊಡುಗೆ ಸಹಕಾರಿಯಾಗಲಿದೆ” ಎಂದು ಶ್ಲಾಘಿಸಿದರು.

ಟಾಟಾ ಟ್ರಸ್ಟ್ ಬೆಂಬಲದೊಂದಿಗೆ ಕಾರ್ಯಾಚರಿಸುತ್ತಿರುವ ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಂಸ್ಥೆಯು ಕ್ಯಾನ್ಸರ್ ರೋಗಿಗಳ ಪರೀಕ್ಷೆ, ಆರಂಭದಲ್ಲೇ ಕ್ಯಾನ್ಸರ್ ಪತ್ತೆ ಹಚ್ಚುವಿಕೆ ಹಾಗೂ ಕ್ಯಾನ್ಸರ್ ರೋಗಕ್ಕೆ ಸುಧಾರಿತ ಚಿಕಿತ್ಸೆ ಒದಗಿಸುವ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರವಾಗಿದೆ. ಈ ಪ್ರಾಂತ್ಯದಲ್ಲಿನ ಕ್ಯಾನ್ಸರ್ ಆರೈಕೆ ಸೇವೆಯನ್ನು ಸುಧಾರಿಸಲು ಸೂಕ್ಷ್ಮ ತಂತ್ರಜ್ಞಾನವನ್ನು ಅಳವಡಿಸಿ ಕೊಳ್ಳುವ ಝುಲೇಖಾ ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಂಸ್ಥೆಯ ಬದ್ಧತೆಗೆ ಈ ನೂತನ ಪೋರ್ಟೆಬಲ್ ಅಲ್ಟ್ರಾಸೌಂಡ್ ಯಂತ್ರದ ಸೇರ್ಪಡೆಯು ಹೊಸ ನಿದರ್ಶನವಾಗಿದೆ ಎಂದು ಪ್ರಕಟನೆ ತಿಳಿಸಿದೆ.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News