×
Ad

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್‌ಐಎ ತನಿಖೆಗೊಳಪಡಿಸಲು ಆಗ್ರಹ

Update: 2025-05-08 17:24 IST

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಸಂಸದರು, ಶಾಸಕರನ್ನೊಳಗೊಂಡ ಬಿಜೆಪಿ ನಿಯೋಗ ಗುರುವಾರ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನಿಲ್ ಕುಮಾರ್ ಅವರು, ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಒಟ್ಟಾಗಿ ಪೊಲೀಸ್ ಆಯುಕ್ತರೊಂದಿಗೆ ಚರ್ಚೆ ಮಾಡಿ ಸಾರ್ವಜನಿಕ ವಲಯದಲ್ಲಿ ಮತ್ತು ನಮ್ಮಲ್ಲಿರುವ ಅನುಮಾನ ವ್ಯಕ್ತಪಡಿಸಿದ್ದೇವೆ. ಪ್ರಕರಣವನ್ನು ಎನ್‌ಐಎ ತನಿಖೆಗೆ ಕೊಡಲೇಬೇಕು. ಈ ಕೃತ್ಯದಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಕೃತ್ಯಕ್ಕೆ ಅಂತಾರಾಷ್ಟ್ರೀಯವಾಗಿ ಹಣಕಾಸಿನ ನೆರವು ಬಂದಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಾಗಾಗಿ ಸ್ಥಳೀಯ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ ಎಂದವರು ಹೇಳಿದರು.

ಪ್ರಕರಣದಲ್ಲಿ ಈಗ ಬಂಧಿತ ೮ ಮಂದಿ ಮಾತ್ರ ಇರುವುದಲ್ಲ. ನೇರ ಕೈವಾಡ ಇರುವ ಎಲ್ಲರನ್ನು ಬಂಧಿಸಬೇಕು. ಸ್ಥಳದಲ್ಲಿ ಸಹಕಾರ ಮಾಡಿದ ಮಹಿಳೆಯರ ಮೇಲೆಯೂ ಕ್ರಮ ತೆಗೆದುಕೊಳ್ಳಬೇಕು. ಪ್ರಕರಣದಲ್ಲಿ ೩೫-೪೦ ಮಂದಿ ಇದ್ದಾರೆಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇಲಾಖೆ ತನಿಖೆ ಚುರುಕುಗೊಳಿಸಬೇಕು. ಒತ್ತಡಕ್ಕೆ ಒಳಗಾಗಬಾರದು. ನ್ಯಾಯ ನೀಡಬೇಕು. ಕ್ರಿಮಿನಲ್‌ಗಳಿಗೆ ಪೊಲೀಸರ ಬಗ್ಗೆ ಭಯ ಉಂಟಾಗುವಂತೆ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಹಗುರವಾಗಿ ಪರಿಗಣಿಸಿದರೆ ಪ್ರತಿಭಟನೆ ನಡೆಸುವುದಾಗಿ ಸುನಿಲ್ ಕುಮಾರ್ ಹೇಳಿದರು.

ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತನಿಖೆಯ ಪ್ರಗತಿ ನೋಡಿ ಮುಂದಿನ ತೀರ್ಮಾನ ತೆಗೆದು ಕೊಳ್ಳುತ್ತೇವೆ. ಶುಕ್ರವಾರ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ಎನ್‌ಐಎ ತನಿಖೆಗೆ ಮಧ್ಯಪ್ರವೇಶ ಮಾಡಲು ಮನವಿ ಮಾಡುತ್ತೇವೆ. ಗಡಿಯಲ್ಲಿ ಉದ್ವಿಗ್ನ ವಾತಾವರಣ ಇರುವುದರಿಂದ ಪೊಲೀಸರು ಇನ್ನೊಂದು ರೀತಿಯ ಭದ್ರತೆಯಲ್ಲಿ ತೊಡಗುವಂತಾಗ ಬಾರದೆಂಬ ಕಾರಣಕ್ಕೆ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಿದ್ದೇವೆ ಎಂದು ತಿಳಿಸಿದರು.

ಸುಹಾಸ್ ಕೊಲೆ ಪ್ರಕರಣದ ಹಿಂದೆ ಬಜಪೆ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಕೂಡ ಇರುವುದು ಗೊತ್ತಾಗಿದೆ. ಈ ಬಗ್ಗೆಯೂ ಆಯುಕ್ತರ ಗಮನ ಸೆಳೆದಿದ್ದೇವೆ. ಒಂದೆರಡು ದಿನಗಳ ಯೋಜನೆಯಲ್ಲಿ ಈ ಕೃತ್ಯ ನಡೆಸಲು ಸಾಧ್ಯವಿಲ್ಲ. ಇದು ಪೂರ್ವಯೋಜಿತ ಕೃತ್ಯ. ಇದರಲ್ಲಿ ಭಾಗಿಯಾದವರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಗಬೇಕಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರು.

ರೌಡಿಶೀಟರ್ ಪೊಲೀಸರ ಒಂದು ಪ್ರಕ್ರಿಯೆ. ಮೂರಕ್ಕಿಂತ ಹೆಚ್ಚು ಪ್ರಕರಣ ಇರುವವರಿಗೆ ರೌಡಿಶೀಟ್ ಹಾಕಲಾಗುತ್ತದೆ. ಕೇಸು ಇರುವವರೆಲ್ಲರೂ ಕ್ರಿಮಿನಲ್‌ಗಳಲ್ಲ. ಸುಹಾಸ್ ಶೆಟ್ಟಿ ಸಿದ್ಧಾಂತಕ್ಕಾಗಿ ಹೋರಾಡಿದ್ದ ವ್ಯಕ್ತಿ ಎಂದು ಸುನಿಲ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೇ 11ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಧರ್ಮಸ್ಥಳದ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ ಅವರು ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.

ಸಂಸದ  ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಪುತ್ತೂರು, ಪ್ರತಾಪ ಸಿಂಹ ನಾಯಕ್, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಜಗದೀಶ್ ಶೇಣವ ಮೊದಲಾದವರನ್ನೊಳಗೊಂಡ ನಿಯೋಗ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿ ಚರ್ಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News