ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷಭಾವನೆ ಆರೋಪ: ಇಬ್ಬರ ವಿಚಾರಣೆ
ಮಂಗಳೂರು, ಮೇ 8: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ದ್ವೇಷಭಾವನೆ ಹರಡಿದ ಆರೋಪದಲ್ಲಿ 2 ಪ್ರಕರಣಗಳಲ್ಲಿ ಇಬ್ಬರನ್ನು ಪತ್ತೆ ಹಚ್ಚಿರುವ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಲಾಗಿದೆ.
*ಸುಹಾಸ್ ಶೆಟ್ಟಿಯ ಪೋಟೊ ಹಾಕಿ ವಿಎಚ್‌ಪಿ-ಭಜರಂಗದಳ ಅಶೋಕನಗರ ಮತ್ತು ಶಂಖನಾದ ಎಂಬ ಎರಡು ಇನ್‌ಸ್ಟಾಗ್ರಾಮ್ ಪ್ರೊಪೈಲ್‌ಗಳಲ್ಲಿ ಉದ್ರೇಕಕಾರಿ ಮತ್ತು ಪ್ರಚೋದನಕಾರಿಯಾಗಿ ಧರ್ಮಗಳ ಹಾಗೂ ವರ್ಗಗಳ ಮಧ್ಯೆ ದ್ವೇಷದ ಭಾವನೆ ಹುಟ್ಟು ಹಾಕುವ ಆರೋಪದಲ್ಲಿ ಅಶೋಕನಗರದ ಮನೀಷ್ ಕುಮಾರ್‌ನನ್ನು ಉರ್ವ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
*ಕುಡುಪು ದೇವಸ್ಥಾನದ ಬಳಿ ನಡೆದ ಹತ್ಯೆಯಲ್ಲಿ ಶಾಸಕರ ಆಪ್ತರ ನೇತೃತ್ವದಲ್ಲಿ ನಡೆಸಲಾಗಿದೆ. ಅದನ್ನು ಮುಚ್ಚಿಹಾಕಲು ರೌಡಿಶೀಟರ್ ಸುಹಾಸ್ ಶೆಟ್ಟಿಯನ್ನು ಹತ್ಯೆಗೈಯಲಾಯಿತೇ..? ಎಂದು ಜನಗಳ ಮಧ್ಯೆ ಗೊಂದಲ ಸೃಷ್ಟಿಸಿ ಸಾಮಾನ್ಯ ಜನರನ್ನು ದಿಕ್ಕು ತಪ್ಪಿಸುವ ರೀತಿಯ ಬರಹವನ್ನು ಬರೆದು ಸುಹಾಸ್ ಶೆಟ್ಟಿ ಹತ್ಯೆ, ಗುಂಪು ಹತ್ಯೆಯನ್ನು ಮರೆಮಾಚಿ ಬಿಜೆಪಿ ಪಕ್ಷಕ್ಕೆ ಮೈಲೇಜ್ ನೀಡುವ ಸಲುವಾಗಿ ಸುಹಾಸ್ ಹತ್ಯೆ ಮಾಡಲಾಗಿದೆಯೇ..? ಎಂಬ ಸುದ್ದಿಯನ್ನು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹರಿಬಿಟ್ಟಿದ್ದ ಕಿನ್ನಿಪದವಿನ ಹಸನ್ ಬಾವ ಎಂಬವರನ್ನು ಕಾವೂರು ಪೊಲೀಸರು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದ್ದಾರೆ.