×
Ad

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರ ನೇಮಕ ರದ್ದು ಕೋರಿ ಹೈಕೋರ್ಟ್ ನಲ್ಲಿ ರಿಟ್

Update: 2025-05-08 22:33 IST

ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರನ್ನು ಸರಕಾರ ನೇಮಿಸಿದ್ದು. ಈ ನೇಮಕಾತಿಯನ್ನು ರದ್ದುಪಡಿಸಬೇಕೆಂದು ಕೋರಿ ಪುತ್ತೂರಿನ ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪ್ರಾಧಿಕಾರದ ನಿಯಮಗಳ ಪ್ರಕಾರ, ಅಧ್ಯಕ್ಷ ಸ್ಥಾನವನ್ನು ಪಡೆಯುವವರು ಸ್ಥಳೀಯ ಯೋಜನಾ ಪ್ರದೇಶದ ನಿವಾಸಿಯಾಗಿರಬೇಕು ಮತ್ತು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಆದರೆ, ಅಮಳ ರಾಮಚಂದ್ರ ಅವರು ಮೂಲತಃ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಮಳ ನಿವಾಸಿಯಾಗಿದ್ದು, ಅಲ್ಲಿನ ಮತದಾರರಾಗಿದ್ದಾರೆ. ಅಲ್ಲದೆ, ಅವರು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರೂ ಆಗಿದ್ದಾರೆ.

ಈ ಹುದ್ದೆಯನ್ನು ಪಡೆಯುವ ಸಲುವಾಗಿ, ಅವರು ಬಾಡಿಗೆ ಕರಾರು ಪತ್ರವನ್ನು ಬಳಸಿ ತಮ್ಮ ವಾಸಸ್ಥಳದ ವಿಳಾಸವನ್ನು ಆಧಾರ್ ಕಾರ್ಡ್ನಲ್ಲಿ ಬದಲಾಯಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಲಾಗಿದೆ.

ಅಮಳ ರಾಮಚಂದ್ರ ಅವರ ನೇಮಕಾತಿ ನಿಯಮಬಾಹಿರವಾಗಿದ್ದು ಅದನ್ನು ರದ್ದುಗೊಳಿಸಬೇಕು ಮತ್ತು ನೇಮಕಾತಿಗೆ ತಕ್ಷಣವೇ ತಡೆಯಾಜ್ಞೆ ನೀಡಬೇಕು ಎಂದು ರಾಜೇಶ್ ಬನ್ನೂರು ತಮ್ಮ ವಕೀಲರ ಮೂಲಕ ಹೈಕೋರ್ಟ್‌ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಕೋರಿದ್ದಾರೆ.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಪ್ರಾಧಿಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಿದ್ದಾರೆ.

ಪುಡಾ ಅಧ್ಯಕ್ಷರ ಸ್ಪಷ್ಟನೆ

ಕಳೆದ ಕೆಲ ವರ್ಷದಿಂದ ಪುತ್ತೂರಿನ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿ ಹಾಗೂ ಆಧಾ‌ರ್ ಕಾರ್ಡ್'ನಲ್ಲಿನ ವಿಳಾಸವನ್ನು ಪುತ್ತೂರಿಗೆ ವರ್ಗಾಯಿಸಿ ಕೊಂಡಿದ್ದೇನೆ ಹೊರತು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರವೇ ನನ್ನನ್ನು ಈ ಹುದ್ದೆಗೆ ನೇಮಕ ಮಾಡಿದೆ. ನಾನಾಗಿ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ಪಡೆದು ಕೊಂಡಿಲ್ಲ. ಸರ್ಕಾರ ಬಯಸುವಷ್ಟು ಕಾಲ ಈ ಹುದ್ದೆಯ ಮೂಲಕ ಸಾಮಾಜಿಕ ಸೇವೆ ಮಾಡಲು ನಾನು ಸಿದ್ದ. ಒಂದು ವೇಳೆ ನನ್ನ ನೇಮಕಾತಿ ನಿಯಮ ಬಾಹಿರ ಎಂದು ನ್ಯಾಯಾಲಯ ತೀರ್ಪು ನೀಡಿದರೆ, ತಕ್ಷಣವೇ ಹುದ್ದೆ ತೊರೆಯಲು ಸಿದ್ಧನಿದ್ದೇನೆ. ಇನ್ನು ಅಧಿಕಾರದ ಸ್ಥಾನಮಾನಕ್ಕಾಗಿ ಅಂಟಿಕೊಂಡು ಕೂರುವ ಮನಸ್ಥಿತಿ ನನ್ನದಲ್ಲ. ಈ ಪ್ರಕರಣಕ್ಕಾಗಿ ವಕೀಲರನ್ನು ನೇಮಿಸಿ ವಾದಿಸುವಷ್ಟು ಆರ್ಥಿಕ ಸ್ಥಿತಿಯಾಗಲಿ, ಆಸಕ್ತಿಯಾಗಲಿ ನನಗಿಲ್ಲ. ನ್ಯಾಯಾಲಯದಲ್ಲಿ ನಾನೇ ಖುದ್ದಾಗಿ ವಾದ ಮಂಡಿಸಲು ಸಿದ್ಧನಿದ್ದೇನೆ,” ಎಂದು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News