×
Ad

ಮಹಿಳೆ ಮೃತಪಟ್ಟ ಪ್ರಕರಣ : ಖಾಸಗಿ ಬಸ್ ಚಾಲಕನಿಗೆ ಜೈಲುಶಿಕ್ಷೆ, ದಂಡ

Update: 2025-05-09 22:32 IST

ಮಂಗಳೂರು,ಮೇ 9: ನಗರದ ಬೆಂದೂರ್‌ವೆಲ್ ಜಂಕ್ಷನ್‌ನಲ್ಲಿ 2023ರಲ್ಲಿ ಬಸ್ ಢಿಕ್ಕಿಯಾಗಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ಖಾಸಗಿ ಬಸ್ ಚಾಲಕನಿಗೆ ಮಂಗಳೂರಿನ ಜೆಎಂಎಫ್‌ಸಿ ಮೂರನೇ ನ್ಯಾಯಾಲಯದ 8 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಐರಿನ್ ಡಿ ಸೋಜ (72) ಮೃತಪಟ್ಟಿರುವ ಮಹಿಳೆ. ವಾಮಂಜೂರಿನ ಎಚ್.ಭಾಸ್ಕರ ಶಿಕ್ಷೆಗೊಳಗಾದ ಚಾಲಕ.

2023ರ ಮಾ.30ರಂದು ಮಧ್ಯಾಹ್ನ ಐರಿನ್ ಡಿ ಸೋಜ ಅವರು ಖಾಸಗಿ ಸಿಟಿ ಬಸ್‌ನಲ್ಲಿ ಬಂದು ಬೆಂದೂರ್‌ ವೆಲ್ ಜಂಕ್ಷನ್‌ನಲ್ಲಿ ಇಳಿದು ಅದೇ ಬಸ್‌ನ ಮುಂಭಾಗದಿಂದ ರಸ್ತೆಯನ್ನು ದಾಟುತ್ತಿದ್ದರು. ಆಗ ಐರಿನ್ ಡಿಸೋಜ ಅವರಿಗೆ ಬಸ್ ಢಿಕ್ಕಿಯಾಗಿದ್ದ ಅವರ ತಲೆಯ ಮೇಲೆ ಬಸ್‌ನ ಚಕ್ರ ಹರಿದು ಹೋಗಿ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಚಾಲಕ ವಾಮಂಜೂರಿನ ಎಚ್.ಭಾಸ್ಕರ ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿದ ಪರಿಣಾಮವಾಗಿ ಬಸ್ ಢಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿರುವುದಾಗಿ ಆರೋಪಿಸಲಾಗಿತ್ತು. ಬಸ್ ಚಾಲಕ ಬಸ್ ನಿಲ್ಲಿಸದೇ ಬಸ್‌ನೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ಭಾಸ್ಕರನಿಗೆ 8 ತಿಂಗಳು ಜೈಲುವಾಸ ಹಾಗೂ 27,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ಬಸ್ ನಿರ್ವಾಹಕ ಎರಡನೇ ಆರೋಪಿ ಮುಸ್ತಾಫ ನಿರ್ವಾಹಕ ಪರವಾನಗಿ ಇಲ್ಲದೆ ಕರ್ತವ್ಯ ನಿರ್ವಹಿಸಿರುವುದಕ್ಕಾಗಿ 10,000 ರೂ. ದಂಡ ಹಾಗೂ ನಿರ್ವಾಹಕ ಪರವಾನಗಿ ಇಲ್ಲದೆ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ 3ನೇ ಆರೋಪಿ ಬಸ್ ಮಾಲೀಕ ಸಂತೋಷ್ ಅರುಣ್ ಮಿನೇಜಸ್‌ನಿಗೆ 5,000 ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಾಗರಾಜ್ ಅವರು ತನಿಖೆ ನಡೆಸಿ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರಕಾರದ ಪರ ಸರಕಾರಿ ಅಭಿಯೋಜಕಿ ಗೀತಾ ರೈ ಸಾಕ್ಷಿದಾರರನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.

ಈ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳನ್ನು ನ್ಯಾಯಾಲಯ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಿ ಅಂತಿಮ ತೀರ್ಪು ನೀಡಿದೆ ಎಂದು ಸರಕಾರಿ ಅಭಿಯೋಜಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News