×
Ad

ಪಹಲ್ಗಾಮ್‌ನಲ್ಲಿ ಮಡಿದ ಭಾರತೀಯರಿಗೆ ಶ್ರದ್ಧಾಂಜಲಿ, ಸರ್ಮಧರ್ಮ ಪ್ರಾರ್ಥನಾ ಕಾರ್ಯಕ್ರಮ

Update: 2025-05-10 21:33 IST

ಮಂಗಳೂರು: ಭಾರತದ ಎಲ್ಲರೂ ಒಂದಾಗಿ ಪ್ರಾರ್ಥಿಸಿದಾಗ ಉಗ್ರರ ವಿರುದ್ಧ ಹೋರಾಡುವ ಸೈನಿಕರಿಗೆ ಮತ್ತಷ್ಟು ಶಕ್ತಿ ಹಾಗೂ ಧೈರ್ಯ ಪ್ರಾಪ್ತಿಯಾಗುತ್ತದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ನೇತೃತ್ವದಲ್ಲಿ ಶನಿವಾರ ನಗರದ ರಾಜಾಜೀ ಪಾರ್ಕ್‌ನಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಲ್ಲಿ ಮಡಿದ ಭಾರತೀಯರಿಗೆ ಆಯೋಜಿಸಲಾದ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಸರ್ಮಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತ ಒಂದು ಬೆಳಕು ಅದನ್ನು ಆರಿಸಲು ಯಾರಿಂದಲೂ ಸಾಧ್ಯವಿಲ್ಲ: ಚೊಕ್ಕಬೆಟ್ಟು ಜುಮಾ ಮಸೀದಿಯ ಇಮಾಮ್ ಮೌಲಾನ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ ‘ಭಾರತ ಒಂದು ಬೆಳಕು, ಅದನ್ನು ಯಾರಿಂದಲೂ ಆರಿಸಲು ಸಾಧ್ಯವಿಲ್ಲ. ಪ್ರಪಂಚಕ್ಕೆ ಆತ್ಮಜ್ಞಾನ ನೀಡುವ ಶಕ್ತಿ. ದೇಶಕ್ಕೆ ಆಪತ್ತು ಬಂದಾಗ ಧರ್ಮ ಮರೆತು ಜತೆಯಾಗಿ ನಿಲ್ಲುವ ಸಂಕಲ್ಪ ನಮ್ಮದು. ಭಾರತ ಶಕ್ತಿ ಶಾಲಿಯಾಗಿ ಉಗ್ರರನ್ನು ಮೆಟ್ಟಿನಿಂತು ವಿಶ್ವಕ್ಕೆ ಬೆಳಕಾಗಲಿ. ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸಬೇಕೆಂಬುವುದು ಉಗ್ರರ ಉದ್ದೇಶ. ನಮ್ಮ ಒಗ್ಗಟ್ಟು ಒಡೆದು ದೇಶವನ್ನು ದುರ್ಬಲಗೊಳಿಸುವುದು ಅವರ ಧ್ಯೇಯ. ಆದರೆ ದೇಶಕ್ಕೆ ತೊಂದರೆ ಬಂದಾಗ ದೇಶಕ್ಕಾಗಿ ಹೋರಾಡಲು ಕರೆ ಬಂದಲ್ಲಿ ಎಲ್ಲಾ ಧರ್ಮ ಮರೆತು ಒಂದಾಗಿ ಒಗ್ಗಟ್ಟಾಗಿ ಹೋರಾಡೋಣ ಎಂದರು.

*ಭಯೋತ್ಪಾದಕರು ಅಮಾಯಕರನ್ನು ಹತ್ಯೆ ಮಾಡಿದ ಕೃತ್ಯ ಖಂಡನೀಯ : ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ

ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ವಂ.ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ, ಭಾರತ ವೈವಿದ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಸೌಹಾರ್ದತೆಯಿಂದ ಬಾಳುವ ದೇಶ. ಮಾನವೀಯತೆ ಮರೆತು ಭಯೋತ್ಪಾದಕರು ಅಮಾಯಕರನ್ನು ಹತ್ಯೆ ಮಾಡಿದ ಕೃತ್ಯ ಖಂಡನೀಯ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮಾತನಾಡಿ, ಉಗ್ರವಾದ ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಭಾರತೀಯ ಸೇವೆ ಜಗತ್ತಿಗೆ ನೀಡಿದೆ. ಭಾರತ ಸರಕಾರದ ದಿಟ್ಟ ನಿರ್ಧಾರಕ್ಕೆ ನಮ್ಮ ಬೆಂಬಲ ನಿರಂತರವಾಗಿದೆ ಎಂದ ಅವರು ದೇವರು ಸೈನಿಕರಿಗೆ ಶಕ್ತಿ ತುಂಬಲಿ ಎಂದು ಪ್ರಾರ್ಥಿಸಿದರು.

ನಿಟ್ಟೆ ಪರಿಗಣಿತ ವಿವಿಯ ಸಹ ಉಪಕುಲಪತಿ ಡಾ. ಶಾಂತರಾಮ ಶೆಟ್ಟಿ, ಸಂತ ಅಲೋಶಿಯಸ್ ಪರಿಗಣಿತ ವಿವಿಯ ಕುಲಪತಿ ವಂ.ಡಾ.ಪ್ರವೀಣ್ ಮಾರ್ಟಿಸ್, ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಅಶ್ರಫ್ ಕೆ, ಭಾಸ್ಕರ್ ಕೆ , ವಕ್ಫ್ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಳ್ವಾರಿಸ್, ಪ್ರಮುಖರಾದ ಅಲ್ವಿನ್ ಡಿ ಸೋಜ, ಭಗಿನಿ ಸೆಲ್ವಿನಾ ಫೆರ್ನಾಂಡಿಸ್, ಭಗಿನಿ ಜೆರಾಲ್ಡಿನ್ ಡಿಸೋಜ , ಭಗಿನಿ ಸ್ಮಿತಾ, ವಂ. ರಾಜೇಶ್ ರೊಸಾರಿಯೋ, ಜಯರಾಮ್ ಶೇಖರ್, ಕ್ಯಾ. ದೀಪಕ್ ಅಡ್ಯಂತಾಯ, ಸುಭೇದರ್ ಅಪ್ಪು ಶೆಟ್ಟಿ, ಸುರೇಖ್ ಪೈ, ಭಗವಾನ್ ದಾಸ್, ಕೆ.ಸಿ. ನಾರಾಯಣ್, ಶಾಹುಲ್ ಹಮೀದ್, ಪ್ರಕಾಶ್ ಸಾಲ್ಯಾನ್, ಜೊಕಿಂ ಡಿ ಸೋಜ ಮತ್ತಿತರರು ಪಾಲ್ಗೊಂಡಿದ್ದರು. 




 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News