×
Ad

ದೇರಳಕಟ್ಟೆ: ನಿಟ್ಟೆ ಗ್ಲಾಸ್ ಹೌಸ್ ನಲ್ಲಿ ಭಾರತೀಯ ಸೈನಿಕರಿಗೆ ಕೃತಜ್ಞತೆ ಸಭೆ

Update: 2025-05-13 17:25 IST

ಕೊಣಾಜೆ: ಪಾಕ್ ಉಗ್ರರು ಪಹಲ್ಗಾಮ್ ನಲ್ಲಿ ನಡೆಸಿದ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೈನಿಕರು ತೋರಿದ ಸಾಹಸಕ್ಕೆ ದೇರಳಕಟ್ಟೆಯ ನಿಟ್ಟೆ ವಿವಿ ವತಿಯಿಂದ ಕ್ಷೇಮ ಆಸ್ಪತ್ರೆ ಕ್ಯಾಂಪಸ್ ನ ಗ್ಲಾಸ್ ಹೌಸ್ ನಲ್ಲಿ ಮಂಗಳವಾರ ಕೃತಜ್ಞತೆ ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ಮಾತನಾಡಿ ಭಾರತೀಯ ಸೇನೆಯ ಸಾಹಸಮಯ ಹೋರಾಟ ಶತ್ರು ರಾಷ್ಟ್ರವನ್ನು ಹೆಡೆಮುರಿ ಕಟ್ಟುವ ಮೂಲಕ ಸರಿಯಾದ ಪಾಠ ಕಲಿಸಿದ್ದು ಪ್ರಧಾನ ಮಂತ್ರಿ ಎಚ್ಚರಿಸಿದಂತೆ ಸದ್ಯಕ್ಕೆ ವಿರಾಮ ಅಷ್ಟೇ, ಯುದ್ಧ ನಿಲ್ಲದು, ಪಾಕ್ ಭಾರತದ ಮುಂದೆ ಕದನ ವಿರಾಮ ಅಂಗಲಾಚಿದ್ದರಿಂದ ಮುಂದಿನ ದಿನಗಳಲ್ಲಿ ಆದರೂ ಆ ರಾಷ್ಟ್ರ ಶಾಂತಿಯುತವಾಗಿ ಮುಂದುವರಿಯುತ್ತದೆಯೇ ಎಂದು ಕಾದು ನೋಡಬೇಕಿದೆ ಎಂದರು.

ಪೌರರ ಬೆಂಬಲವಿಲ್ಲದೆ ಯಾವುದೇ ಸೈನಿಕ ಪಡೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಸಮಂಜಸವಾದ ಮತ್ತು ಅತಿಯಾದ ಪ್ರತಿಕ್ರಿಯೆಗಳಿಂದ ದೂರವಿರುವ ನಿರ್ಧಾರಗಳೇ ಶಾಂತಿ ಹಾಗೂ ಸ್ಥಿರತೆಗೆ ನಾಂದಿ ಹಾಡಿದೆ. ಭೂ ಸೈನ್ಯ, ನೌಕಾಪಡೆ, ವಾಯುಪಡೆ ಹಾಗೂ ಇತರ ಪಾರಾಮಿಲಿಟರಿ ಪಡೆಗಳು ನಮ್ಮ ರಾಷ್ಟ್ರದ ರಕ್ಷಣೆಗಾಗಿ ದುಡಿಯುತ್ತಿದ್ದು ಅವರ ಸೇವೆಗೆ ಗೌರವ ಹಾಗೂ ಬೆಂಬಲ ನೀಡಿ, ಅವರ ಜೊತೆಗೆ ನಿಂತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಸೈನಿಕರು ಶಿಸ್ತು, ಧೈರ್ಯ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವುದು ಇದೆ. ಸೈನಿಕ ಅಧ್ಯಯನ ಮತ್ತು ತೀವ್ರ ತರಬೇತಿಗಳ ಮೂಲಕ ಅವರು ಯಾವಾಗಲೂ ದೇಶ ಸೇವೆಗೆ ಸಿದ್ಧರಾಗಿರುತ್ತಾರೆ. ದೇಶದ ಭದ್ರತೆ, ಕಲ್ಯಾಣ ಮತ್ತು ಗೌರವವೇ ಅವರ ಸೇವೆ ಎಂದರು.

ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಕ್ಷೇಮ ಡೀನ್ ಡಾ. ಸಂದೀಪ್ ರೈ, ಡಾ. ಜಯಪ್ರಕಾಶ್ ಶೆಟ್ಟಿ, ನಿವೃತ್ತ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ವಿವಿ ಅಧಿಕಾರಿ ಪ್ರಸನ್ನ ಹೆಗ್ಡೆ, ಎ. ಬಿ. ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ ಡೀನ್ ಡಾ. ಮಿತ್ರ ಎನ್. ಹೆಗ್ಡೆ, ವಾಯುಸೇನೆ ಸಿಎಂಡಿಇಗಳಾದ ಎಸ್. ಕೆ. ಪೈ ಹಾಗೂ ವಿ. ಕೆ. ಶಶೀಂದ್ರನ್, ಕರ್ನಲ್ ಬಿ. ಎಸ್. ಘಿವಾರಿ, ಡಾ. ರಘುನಾಥ ಉಪ್ಪೋರ್, ಡಾ. ರಾಘವೇಂದ್ರ ಹುಚ್ಚನವರ್, ಗೌರವ ಕ್ಯಾಪ್ಟನ್ ಅಮ್ರೀಕ ಸಿಂಗ್, ಗೌರವ ಲೆಫ್ಟಿನೆಂಟ್ ವ್ಯಾಲಿ ಪಿರೇರಾ, ಸುಬೇಧರ್ ದಯಾನಂದ, ಹವಾಲ್ದಾರ್ ಸುಜಯ್ ಪಿರೇರಾ, ಹವಾಲ್ದಾರ್ ಭಾಸ್ಕರ್, ಹವಾಲ್ದಾರ್ ರಂಜಿತ್, ಎನ್. ಕೆ. ಸುರೇಶ್, ಎನ್. ಕೆ. ರಾಧಾಕೃಷ್ಣ ಪಿ.ವಿ ಹಾಗೂ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News