×
Ad

ಗುರುಪುರ: ಸರಕಾರಿ ಜಮೀನು ಒತ್ತುವರಿ ಮಾಡಿ ಪ್ರವಾಸಿ ಕೇಂದ್ರ ನಿರ್ಮಾಣ; ಆರೋಪ

Update: 2025-05-13 23:09 IST

ಗುರುಪುರ: ಇಲ್ಲಿನ ಫಲ್ಗುಣಿ ನದಿಯ ದಂಡೆಯ ಪಕ್ಕದಲ್ಲಿರುವ ಸಿಆರ್‌ಝೆಡ್ ವ್ಯಾಪ್ತಿಯ ಸರಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಪ್ರವಾಸಿ ಕೇಂದ್ರ ನಿರ್ಮಿಸಿರುವುದಲ್ಲದೆ, ಸ್ಥಳೀಯರ ಸಂಚಾರ ಕ್ಕಿರುವ ಸರಕಾರಿ ಕಾಂಕ್ರಿಟ್ ರಸ್ತೆಯನ್ನು ಮಣ್ಣು ಸುರಿದು ಮುಚ್ಚಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗುರುಪುರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ ಎಂಬವರು ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಫಲ್ಗುಣಿ ನದಿಯ ದಡದಲ್ಲಿ ಸರಕಾರಿ ನಿವೇಶನವನ್ನು ಅಕ್ರಮವಾಗಿ ಬಳಸಿಕೊಂಡು ಸ್ನಾನಗೃಹ, ಉದ್ಯಾನವನ, ಅತಿಥಿ ಗೃಹಗಳನ್ನು ನಿರ್ಮಿಸಿದ್ದಾರೆ. ಇದರ ಜೊತೆಗೆ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮಹಾಕಾಳೇಶ್ವರನ ಏಕಶಿಲಾ ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ. ಇದಕ್ಕಾಗಿ ಬಂಡಸಾಲೆಯಿಂದ ಕಾರಮೊಗೇರುವಿಗೆ ಹೋಗುವ ಸರಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಕಾಂಕ್ರಿಟ್ ರಸ್ತೆಯನ್ನು ಮುಚ್ಚಿದ್ದಾರೆ ಎಂದು ಗುರಪುರ ಮೂಳೂರು ಗ್ರಾಮಸ್ಥರು ದೂರಿದ್ದಾರೆ.

ಧಾರ್ಮಿಕ ಕ್ಷೇತ್ರಗಳಾದ ಕೊರದಬ್ಬು, ಕಲ್ಲುರ್ಟಿ ದೈವಸ್ಥಾನ, ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನ ಮತ್ತು ನಾಗಬನಗಳು ಇದೇ ರಸ್ತೆಯಾಗಿ ಇವೆ. ರಸ್ತೆ ಮುಚ್ಚಿರುವುದರಿಂದ ಇಲ್ಲಿನ ಧಾರ್ಮಿಕ ಕಾರ್ಯಗಳಿಗೂ ತೊಡಕುಂಟಾಗುತ್ತಿದೆ ಎಂದು ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಈ ಭಾಗದ ಜನರು ಸದ್ಯ ಬಂಡಸಾಲೆಯಿಂದ ನೇರವಾಗಿ ಕಾರಮೊಗೇರುವಿಗೆ ತೆರಳುತ್ತಿದ್ದರು. ಈ ರಸ್ತೆ ಯನ್ನು ದುರ್ಗಾ ಪ್ರಸಾದ್ ಶೆಟ್ಟಿ ಭಾರೀ ಪ್ರಮಾಣದಲ್ಲಿ ಮಣ್ಣು ಸೇರಿದು ಮುಚ್ಚಿರುವುದರಿಂದ ಈ ಭಾಗದ ಸುಮಾರು 10 ಮನೆಗಳ ನಿವಾಸಿಗಳು ರಾಷ್ಟ್ರೀಯ ಹೆದ್ದಾರಿಯಾಗಿ ಪರಾರಿ ಮೂಲಕ ಸುಮಾರು 4-5 ಕಿ.ಮೀ. ಸುತ್ತುವರಿದು ಗ್ರಾಮ ಸೇರಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಗ್ರಾಮದಲ್ಲಿರುವ ಹಿರಿಯರು, ಅನಾರೋಗ್ಯಪೀಡಿತರು ಮತ್ತು ತುರ್ತು ಸಂದರ್ಭಗಳಲ್ಲಿ ನಾವು ಸಂಕಷ್ಟಕ್ಕೆ ಸಿಲುಕುವಂತಾ ಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸರಕಾರಿ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಹಾಕಾಳೇಶ್ವರನ ಅಕ್ರಮ ಪ್ರತಿಮೆಯ ಪ್ರತಿಷ್ಠಾಪನೆ ಮೇ 15ರಿಂದ ಆರಂಭಗೊಳ್ಳಲಿದೆ. ಈ ಪ್ರತಿಮೆ ನಿರ್ಮಾಣಕ್ಕಾಗಿ ಗುರುಪುರ ಗ್ರಾಮ ಪಂಚಾಯತ್‌ನಿಂದ ಯಾವುದೇ ಪರವಾನಿಗೆ ಪಡೆದುಕೊಂಡಿಲ್ಲ ಎಂದು ದೂರುವ ಗ್ರಾಮಸ್ಥರು, ಈ ಸಂಬಂಧ ಹಲವು ಬಾರಿ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನ ವಾಗಿಲ್ಲ. ಹಾಗಾಗಿ, ಗ್ರಾಮಸ್ಥರಿಗೆ ಅನ್ಯಾಯ ಎಸಗುತ್ತಾ ಸರಕಾರಿ ಜಮೀನನ್ನು ಒತ್ತುವರಿ ಮಾಡಿ ಅಕ್ರಮವಾಗಿ ನಿರ್ಮಿಸಿರುವ ಎಲ್ಲಾ ಕಟ್ಟಡಗಳು, ಮೂರ್ತಿಯನ್ನು ತೆರವುಗೊಳಿಸಿ ನಿವೇಶನವನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ಪಡೆದುಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

"ಕಾಂಕ್ರಿಟ್ ರಸ್ತೆಗೆ ಮಣ್ಣು ಸುರಿದು ಮುಚ್ಚಲಾಗಿದೆ. ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಂಡು ಗ್ರಾಮಸ್ಥರ ಸಹಾಯಕ್ಕೆ ಧಾವಿಸಬೇಕು:

- ಹರಿಪ್ರಸಾದ್ ರೈ, ಮೂಳೂರು ಗ್ರಾಮಸ್ಥ

"ಮುಚ್ಚಿರುವ ಬಂಡಸಾಲೆ- ಕಾರಮೊಗೇರು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ಪೊಲೀಸ್ ರಕ್ಷಣೆ ಪಡೆದು ಅಕ್ರಮ ಕಟ್ಟಡಗಳನ್ನು ತೆರವು ಮಾಡಬೇಕು. ಇಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು, ದೇವಸ್ಥಾನ, ದೈವಸ್ಥಾನಕ್ಕೆ ಬರುವ ಭಕ್ತಾದಿಗಳ ಭಾವನೆಗೆ ಧಕ್ಕೆಯಾಗದಂತೆ ರಸ್ತೆ ವ್ಯವಸ್ಥೆ ಮಾಡಿಕೊಡ ಬೇಕು. ದುರ್ಗಾ ಪ್ರಸಾದ್ ಶೆಟ್ಟಿ ಗ್ರಾಮಸ್ಥರ ಮೇಲೆ ನಡೆಸುತ್ತಿರುವ ಅನ್ಯಾಯಗಳಿಗೆ ಜಿಲ್ಲಾಡಳಿತ ತಕ್ಷಣಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ನಿರಂತರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು".

- ಪ್ರೀತಮ್ ಗುರುಪುರ, ಗ್ರಾಮಸ್ಥ

ಗುರುಪುರ ಮೂಳೂರು ಫಲ್ಗುಣಿ ನದಿ ದಡದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ರುವ ಗ್ರಾಮಸ್ಥರು, ಈ ಸಂಬಂಧ ಪ್ರಧಾನ ಮಂತ್ರಿಗೆ ಲಿಖಿತ ದೂರು ಸಲ್ಲಿಸಲಾಗಿದೆ. ಅದರ ಪ್ರತಿಯನ್ನು ದ.ಕ. ಸಂಸದ ಬ್ರಿಜೇಶ್ ಚೌಟರಿಗೂ ರವಾನಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

"ಗುರುಪುರ ಗ್ರಾಪಂ ಪ್ರದೇಶದಲ್ಲಿ ನಡೆದಿರುವ ಘಟನೆಗಳ ಕುರಿತು ಕಂದಾಯ ನಿರೀಕ್ಷಕರಿಂದ ವರದಿ ಪಡೆದು ಕೊಂಡು ಸರ್ವೆಗೆ ಸೂಚನೆ ನೀಡಿದ್ದೇವೆ. ಸರ್ವೇಯ ವರದಿ ಬಂದ ಬಳಿಕ ಅದರಂತೆ ಕ್ರಮ ಜರುಗಿಸಲಾಗುವುದು".

- ಪ್ರಶಾಂತ್ ಪಾಟೀಲ್, ತಹಶೀಲ್ದಾರ್, ಮಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News