ಪ್ರಥಮ ಚಿಕಿತ್ಸೆ ಅರಿವು ಅತ್ಯಗತ್ಯ: ಪ್ರೊ.ಪಿ.ಎಲ್.ಧರ್ಮ
ಕೊಣಾಜೆ: ಯಾವುದೇ ಅವಘಡ, ಅಪಘಾತ ಸಂಭವಿಸಿದ ತಕ್ಷಣ ಪೋಟೋ ವೀಡಿಯೋ ತೆಗೆಯುವ ಬದಲು ಗಾಯಾಳುಗಳಿಗೆ ಮಾನವೀಯತೆಯೊಂದಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನ ನಮ್ಮದಾಗಬೇಕು. ಯುವ ಸಮುದಾಯ, ವಿದ್ಯಾರ್ಥಿಗಳು ಇಂತಹ ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾ ಗಾರದಲ್ಲಿ ಭಾಗವಹಿಸಿ ಅರಿವನ್ನು ಹೆಚ್ಚಿಸುವುದರೊಂದಿಗೆ ಹಳ್ಳಿಯ ಜನತೆಗೂ ಈ ಕುರಿತು ಮಾಹಿತಿ ಒದಗಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬಹುದು ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಹೇಳಿದರು.
ಅವರು ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ವಿದ್ಯಾರ್ಥಿ ಪರಿಷತ್ತು ವತಿಯಿಂದ ಮಂಗಳ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಚಿಕಿತ್ಸೆ,ಆರೋಗ್ಯ ರಕ್ಷಣೆಯ ಮೂಲಕ ಮರುಜೀವ ಕೊಡುವವರು ವೈದ್ಯರು. ಆದ್ದರಿಂದ ವೈದ್ಯರ ಸೇವೆಯ ಬಗ್ಗೆ ಸದಾ ಗೌರವವಿರಬೇಕು ಎಂದರು.
ನಿಟ್ಟೆ ಕ್ಷೇಮಾ ಆಸ್ಪತ್ರೆಯ ವೈದ್ಯರಾದ ಪ್ರೊ.ಶ್ರೀ ಪಾದ ಜಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಈಗ ಆಧುನಿಕತೆ, ತಂತ್ರಜ್ಞಾನದ ಯುಗವಾಗಿದೆ. ಮನುಷ್ಯನಿಗೆ ಎದುರಾಗುವ ಯಾವುದೇ ಅವಘಡಗಳ ಸಂದರ್ಭದಲ್ಲಿ ಮಾಹಿತಿಯೊಂದಿಗೆ ನಾವು ವೀವೇಕಪೂರ್ಣವಾಗಿ ವ್ಯವಹರಿಸಿದರೆ ಅಪಾಯ ಕಾರಿ ಸಂದರ್ಭದಲ್ಲಿಯೂ ಜೀವ ಉಳಿಸಬಹುದು. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರ ಪ್ರಯೋಜನಕಾರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೀದಿನಾಯಿಗಳ ಹಾಗೂ ಪ್ರಾಣಿ ಸಂರಕ್ಷಕಿ ರಜನಿ ದಾಮೋದರ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾದ ಪ್ರೊ.ಪ್ರಶಾಂತ್ ನಾಯ್ಕ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.
"ಶಿಕ್ಷಣ, ಉದ್ಯೋಗದಿಂದ ಮಾತ್ರ ಬದುಕು ಪರಿಪೂರ್ಣವಾಗದು. ಸ್ವಾರ್ಥ ಮನೋಭಾವನೆಯನ್ನು ತೊರೆದು ಮಾನವೀಯ ಮೌಲ್ಯವನ್ನು ಬೆಳೆಸಿಕೊಳ್ಳಬೇಕು. ತಂದೆ ತಾಯಿಗೆ ಮೊದಲ ಗೌರವಕೊಡುವು ದರೊಂದಿಗೆ, ಪ್ರಾಣಿ ಸಂರಕ್ಷಣೆಯ ಬಗೆಗೂ ನಮ್ಮ ಮನ ಮಿಡಿಯಬೇಕು".
-ರಜನಿ ದಾಮೋದರ ಶೆಟ್ಟಿ, ಪ್ರಾಣಿಗಳ ಸಂರಕ್ಷಕಿ