×
Ad

ಮಂಗಳೂರು| ಐಫೋನ್ ದೋಷಪೂರಿತ: ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು

Update: 2025-05-14 23:26 IST

ಸಾಂದರ್ಭಿಕ ಚಿತ್ರ

ಮಂಗಳೂರು: ಆ್ಯಪಲ್ ಕಂಪೆನಿಯ ಐಫೋನ್ ಖರೀದಿ ಮಾಡಿದ ಒಂದೆರಡು ವರ್ಷದಲ್ಲೇ ಬಳಕೆ ಮಾಡಲು ಅಸಾಧ್ಯವಾಗುವಂತೆ ದೋಷ ಕಾಣಿಸಿದ್ದು ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಮಂಗಳೂರು ಬಿಜೈ ನಿವಾಸಿ ಸಂಪತ್ ಕುಮಾರ್ ರವರು ಪ್ರತಿಷ್ಟಿತ ಎಲೆಕ್ಟ್ರಾನಿಕ್ಸ್‌ ಮಳಿಗೆಯಾದ ರಿಲಯನ್ಸ್ ಡಿಜಿಟಲ್ಸ್ ನಿಂದ ದುಬಾರಿ ಐಫೋನ್ ಖರೀದಿ ಮಾಡಿದ್ದರು. ಖರೀದಿ ಮಾಡಿದ ಕೆಲವು ಸಮಯದಲ್ಲೆ ಆ ಫೋನ್ ನಲ್ಲಿ ದೋಷ ಕಂಡು ಬಂದಿದ್ದು ಅದರ ಡಿಸ್ಪ್‌ಪ್ಲೇ ಹಾಳಾಗಿತ್ತು. ಎದುರುದಾರರಲ್ಲಿ ಹೋದಾಗ ಎದುರುದಾರರು ಸರ್ವಿಸ್ ಸೆಂಟರ್‌ಗೆ ಅದನ್ನು ಕೊಡಲು ಹೇಳಿದರು.

ಅದರಂತೆ ಎರಡನೆ ಎದುರುದಾರರಾದ ಬಲ್ಮಠದ ಮಾಪಲ್ ಎಕ್ಸ್ ಎನ್ನುವ ಸರ್ವಿಸ್ ಸೆಂಟರ್‌ಗೆ ಅದನ್ನು ರಿಪೇರಿಗೆ ನೀಡಿದ್ದರು. ಆದರೆ ರಿಪೇರಿಗೆ ದೊಡ್ಡ ಮೊತ್ತವನ್ನು ಹೇಳಿದ ಎರಡನೆ ಎದುರುದಾರರು ಮೊಬೈಲ್ ಫೋನ್ ವಾರಂಟಿ ಕಾಲಮಿತಿಯೊಳಗೆ ಇಲ್ಲ, ಹಾಗಾಗಿ ಉಚಿತವಾಗಿ ರಿಪೇರಿ ಮಾಡಲು ಆಗುವುದಿಲ್ಲ ಎಂದರು. ಸ್ವಲ್ಪ ಕಾಲ ಅದನ್ನು ಇಟ್ಟುಕೊಂಡು ಇದು ಸರಿಪಡಿಸಲಾಗದ ದೋಷ ಎಂದು ಮೊಬೈಲ್ ಹಿಂದಿರುಗಿಸಿದರು.

ದೂರುದಾರರು ಮೂರನೇ ಎದುರುದಾರರಿಗೆ ಅಂದರೆ ಆ್ಯಪಲ್ ಕಂಪೆನಿಗೆ ದೋಷಪೂರಿತ ಐಫೋನ್ ಬಗ್ಗೆ ಮೇಲಿಂದ ಮೇಲೆ ಈಮೇಲ್ ಗಳನ್ನು ಕಳಿಸಿದ್ದರೂ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ದೂರುದಾರರು ಜಿಲ್ಲಾ ಗ್ರಾಹಕ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು. ಆ್ಯಪಲ್ ಕಂಪೆನಿಯವರು ಹಾಜರಾಗಿ ಐಫೋನ್ ಖರೀದಿ ಮಾಡಿ ಒಂದು ವರ್ಷ ಕಳೆದುದರಿಂದ ಫೋನ್ ರಿಪೇರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.

ದೂರುದಾರರ ಅಹವಾಲು ಮತ್ತು ಪ್ರತಿವಾದಿಗಳ ಪ್ರತಿರಕ್ಷೆಯನ್ನು ಪರಿಶೀಲಿಸಿ ಮಾನ್ಯ ಗ್ರಾಹಕ ನ್ಯಾಯಾಲಯ ದೂರನ್ನು ಮಾನ್ಯ ಮಾಡಿದೆ. ಮೂರೂ ಎದುರುದಾರರು ಒಟ್ಟಾಗಿ ಆ್ಯಪಲ್ ಐಫೋನ್‌ನ ಬಾಬ್ತು 81,800/- ಬಡ್ಡಿ ಸಮೇತ ದೂರುದಾರರಿಗೆ ಕೊಡಬೇಕೆಂದೂ ಮತ್ತು ದಾವೆ ಖರ್ಚು ಹಾಗೂ ಹತ್ತು ಸಾವಿರ ಪರಿಹಾರ ನೀಡಬೇಕೆಂದೂ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರವಾಗಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News