ಪ್ರಣಾಳಿಕಾ ಭರವಸೆಯಂತೆ ಭೂಮಿಯ ಹಕ್ಕುಪತ್ರ: ಐವನ್ ಡಿಸೋಜಾ
ಮಂಗಳೂರು: ಚುನಾವಣೆಯ ಸಂದರ್ಭ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭೂಮಿಯ ಮಾಲಕತ್ವದ ಹಕ್ಕು ನೀಡುವ ಹಕ್ಕುಪತ್ರ ದೊರಕಿಸಿಕೊಡುವ ಬಗ್ಗೆ ಭರವಸೆ ನೀಡಿತ್ತು. ಅದರಂತೆ ಸರ್ವೆ ಕಾರ್ಯ ನಡೆಸಲಾ ಗಿದ್ದು, ಇದೀಗ ರಾಜ್ಯದಲ್ಲಿಯೇ ಅತ್ಯಧಿಕ ಹಕ್ಕುಪತ್ರವನ್ನು ದ.ಕ. ಜಿಲ್ಲೆಯಲ್ಲಿ ನೀಡಲಾಗುತ್ತಿದೆ. ದ.ಕ. ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆಯ ಸಂದರ್ಭದಲ್ಲಿ ಹಕ್ಕುಪತ್ರ ವಿತರಣೆ ನಡೆಯಲಿದೆ ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಹೇಳಿದ್ದಾರೆ.
ಮನಪಾ ಕಟ್ಟಡದಲ್ಲಿರುವ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರ್.ಅಶೋಕ್ ಅವರು ಅಧಿಕಾರದಲ್ಲಿದ್ದಾಗ ಪ್ರತೀ ಮನೆಗೆ ಆರ್‌ಟಿಸಿ ನೀಡುತ್ತೇವೆ ಎಂದರೂ ಕೂಡ ಯಾರಿಗೂ ಒಂದೂ ಆರ್‌ಟಿಸಿ ನೀಡಲು ಸಾಧ್ಯವಾಗಿರಲಿಲ್ಲ. ಪೋಡಿ ಮುಕ್ತ ಮಾಡುವ ಕಾರ್ಯದಲ್ಲಿ ದ.ಕ. ಜಿಲ್ಲೆ ಪ್ರಥಮವಾಗಿದೆ. ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸುವ ಬಿಜೆಪಿಗೆ ಇದು ದಾಖಲೆ ಸಹಿತ ಕಣ್ಣು ತೆರೆಸುವ ಕಾರ್ಯ ಎಂದವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ ಹಕ್ಕು ಪತ್ರಕ್ಕೆ ಸಂಬಂಧಿಸಿ ಸ್ವೀಕೃತವಾದ 30687 ಅರ್ಜಿಗಳಲ್ಲಿ 8808 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಬೆಳ್ತಂಗಡಿಯಲ್ಲಿ 1290, ಸುಳ್ಯದಲ್ಲಿ 488, ಪುತ್ತೂರು 745, ಕಡಬ 891 ಸೇರಿ ಪುತ್ತೂರು ಉಪ ವಿಭಾಗದಲ್ಲಿ 3414 ಹಾಗೂ ಮಂಗಳೂರು ವಿಭಾಗದಲ್ಲಿ 2356 ಮಂದಿಗೆ ಮಂದಿಗೆ ಪೋಡಿ ಮುಕ್ತ ಮಾಡಿ ನಿಮ್ಮ ಹಕ್ಕು ಇಲ್ಲಿದೆ ಎಂದು ಆರ್‌ಟಿಸಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿತರಿಸಲಿದ್ದಾರೆ.
2016ರಲ್ಲಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನಡೆಸಿದ ಜಿಲ್ಲಾಧಿಕಾರಿ ಕಚೇರಿ ಈಗ ಪೂರ್ಣವಾಗಿ ಅವರಿಂದಲೇ ಉದ್ಘಾಟನೆಯಾಗಲಿದೆ. ಸ್ಟೇಟ್‌ಬ್ಯಾಂಕ್‌ನ ಜಿಲ್ಲಾಧಿಕಾರಿ ಕಚೇರಿಯ ಎಲ್ಲಾ ಇಲಾಖೆಗಳು ಇಲ್ಲಿಗೆ ಸ್ಥಳಾಂತರವಾಗಲಿದೆ. ಹಳೆ ಡಿಸಿ ಕಚೇರಿಯನ್ನು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಒದಗಿಸುವ ನಿಟ್ಟಿನಲ್ಲಿ ಮನವಿ ಮಾಡಲಾಗುವುದು ಎಂದವರು ಹೇಳಿದರು.
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ಪ್ರಗತಿ ಪರಿಶೀಲನೆಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಮಳೆಗಾಲ ಮುಗಿಯುವುದರೊಳಗೆ ಉಸ್ತುವಾರಿಸಚಿವರು ದಿನಾಂಕ ನಿಗದಿಮಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ಅಗತ್ಯ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲನೆಗೆ ನಾವು ಸಿದ್ಧರಿದ್ದು, ಅಭಿವೃದ್ಧಿ ಕಾರ್ಯವನ್ನು ಮರೆತಿಲ್ಲ ಎಂದವರು ಹೇಳಿದರು.
ಮಂಗಳೂರು-ಬೈಂದೂರು ಮೆಟ್ರೋ ಕರಾವಳಿ ಭಾಗದ ಜನರ ಕನಸು, ಎನ್‌ಐಟಿಕೆಯನ್ನು ಐಐಟಿಯಾಗಿ ಮೇಲ್ದರ್ಜೆಗೇರಿಸುವುದು, ನಗರದಲ್ಲಿರುವ ಜೈಲನ್ನು ಮುಡಿಪು ಸಮೀಪದ ಬಾಳೆಪುಣಿಯಲ್ಲಿ ಸ್ಥಳಾಂತರಿ ಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ವಹಿಸುವುದು. ಹೆಚ್ಚುವರಿ ಏರ್‌ಪೋರ್ಟ್ ರಚನೆ ಇತ್ಯಾದಿ ಅಂಶಗಳ ಬಗ್ಗೆ ಸಿಎಂ ಅವರ ಜತೆಗೆ ಚರ್ಚಿಸಲಾಗುವುದು ಎಂದರು.
ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಭಾಸ್ಕರ್ ಕೆ. ಉಪಸ್ಥಿತರಿದ್ದರು.