×
Ad

ರಾಜ್ಯ ಸರಕಾರದಿಂದ ಅಭಿವೃದ್ಧಿಯಲ್ಲಿ ಕರಾವಳಿಯ ನಿರ್ಲಕ್ಷ್ಯ: ಸಂಸದ ಬ್ರಿಜೇಶ್ ಚೌಟ ಆರೋಪ

Update: 2025-05-15 18:27 IST

ಮಂಗಳೂರು: ಕರಾವಳಿಯ ನಾಗರಿಕರು ರಾಷ್ಟ್ರೀಯತೆ ಪ್ರತಿಪಾದನೆ ಮಾಡುತ್ತಿರುವವರು ಎಂಬ ಕಾರಣಕ್ಕೆ ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸರಕಾರ ಕರಾವಳಿಯನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಪರವಾಗಿ ನಿಂತ ಜನರ ವಿರುದ್ಧ ಸಿಎಂ ಹಗೆ ಸಾಧಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಿಲ್ಲೆಗೆ ಸಮರ್ಪಕವಾಗಿ ಭೇಟಿ ನೀಡುತ್ತಿಲ್ಲ, ಪ್ರಗತಿ ಪರಿಶೀಲನಾ ಸಭೆ ಮಾಡಲು ಅವರಿಗೂ ಪುರುಸೊತ್ತಿಲ್ಲ. ಮುಖ್ಯಮಂತ್ರಿ ಗಂಟೆಯ ಲೆಕ್ಕಾಚಾರದಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಾರೆ. ಜಿಲ್ಲೆಯ ಅಭಿವೃದ್ಧಿಗೆ ಬಗ್ಗೆ ಮಾತನಾಡುವ ಸೌಜನ್ಯ ಅವರಿಗಿಲ್ಲ. ಕಾಂಗ್ರೆಸ್ ನೇತೃ ತ್ವದ ಸರಕಾರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡದೆ ಮಂಗಳೂರನ್ನು ಕೋಮು ಸೂಕ್ಷ್ಮ ಪ್ರದೇಶ ಎಂಬಂತೆ ಬಿಂಬಿಸಲಾಗುತ್ತಿದೆ. ಕಾಂಗ್ರೆಸ್‌ನ ಮುಸ್ಲಿಂ ತುಷ್ಟೀಕರಣ ನೀತಿ, ರಾಷ್ಟ್ರವಿರೋಧಿ ಶಕ್ತಿಗಳ ಒಡಂಬಡಿಕೆ ಯನ್ನು ಕರಾವಳಿ ಕರ್ನಾಟಕ ಜನರು ಬಯಲುಗೊಳಿಸುತ್ತಿದ್ದಾರೆ. ಒಟ್ಟಿನಲ್ಲಿ ತುಳುನಾಡಿನ ಅಭಿವೃದ್ಧಿಗೆ ಹಿನ್ನಡೆ ಮಾಡುವ ಸಂಚು ಇದಾಗಿದೆ ಎಂದು ಆರೋಪಿಸಿದರು.

ಕೇಂದ್ರದ ಅನುದಾನದ ಬಗ್ಗೆ ದೂಷಿಸುವ ಸಿಎಂ ಸಿದ್ಧರಾಮಯ್ಯ ಅವರು ದಕ್ಷಿಣ ಜಿಲ್ಲೆಗೆ ಬಂದು ಶಾಸಕರು, ಸಂಸದರನ್ನು ಒಟ್ಟು ಸೇರಿಸಿ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ. ಗೃಹ ಸಚಿವ ಅಮಿತ್ ಶಾ ಅವರು ಪೊಲೀಸ್ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಯಾವುದೇ ಘಟನೆಯಲ್ಲಿ ಉಗ್ರವಾದ, ರಾಷ್ಟ್ರವಿರೋಧಿ, ಕೋಮು ಸಂಘರ್ಷ ಸಂಶಯ ಕಂಡು ಬಂದರೆ ಆ ಪ್ರಕರಣ ಕೂಡಲೇ ಎನ್‌ಐಎಗೆ ಹಸ್ತಾಂತರಿಸಬೇಕು ಹೇಳಿದ್ದಾರೆ. ಈ ಕಾರಣದಿಂದ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂಬ ಆಗ್ರಹ ನಮ್ಮದಾಗಿದೆ. ಆದರೆ ಚುನಾವಣಾ ಸಂದರ್ಭ ತನಗೆ ಬೆಂಬಲ ನೀಡಿದ ಎಸ್‌ಡಿಪಿಐಗೆ ಸಿದ್ಧರಾಮಯ್ಯ ಅವರು ರಿಟರ್ನ್ ಉಡುಗೊರೆಯನ್ನು ನೀಡುತ್ತಿದ್ದಾರೆ ಎಂದರು.

ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾರ್ಯಕರ್ತರು ಒಂದೇ. ಕರಾವಳಿ ಕರ್ನಾಟಕದ ಅಪರಾಧ ಚಟುವಟಿಕೆ, ದಂಧೆ, ಡ್ರಗ್ ಮಾಫಿಯಾಕ್ಕೆ ನೇರವಾಗಿ ಪಿಎಫ್‌ಐ ಕಾರ್ಯಕರ್ತರು ಕಾರಣ. ಇಂತಹವರ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ರಕ್ಷಣೆ ಮಾಡುತ್ತಿದೆ. ಈ ಜಿಲ್ಲೆಯ ಬಗ್ಗೆ ಕಾಂಗ್ರೆಸ್ ಸರಕಾರ ಹಗೆ ಸಾಧನೆ ಮನೋಭಾವ ವಿರುದ್ಧ ನಮ್ಮ ಹೋರಾಟವಿದೆ. ಈ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ ಮತ್ತು ಅಭಿವೃದ್ಧಿಗೆ ನಾವು ಕಟಿಬದ್ಧರಾಗಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿಘಿ, ಯತೀಶ್ ಅರ್ವಾರ್, ವಕ್ತಾರರಾದ ಸತೀಶ್ ಪ್ರಭು, ರಾಜ್‌ಗೋಪಾಲ್ ರೈಘಿ, ಅರುಣ್ ಶೇಟ್, ಮಾಧ್ಯಮ ಸಂಚಾಲಕ ವಸಂತ್ ಪೂಜಾರಿ, ಬಿಜಪಿ ಮುಖಂಡ ನಿತಿನ್ ಕುಮಾರ್ ಉಪಸ್ಥಿತರಿದ್ದರು.

ರಾಜ್ಯದ ಕಾಂಗ್ರೆಸ್ ಸರಕಾರ ಬಜೆಟ್‌ನಲ್ಲಿ ಕರಾವಳಿ ಅಭಿವೃದ್ಧಿಗೆ ಘೋಷಣೆ ಮಾಡಿರುವ ಯೋಜನೆಗಳ ದೊಡ್ಡ ಪಟ್ಟಿಯೇ ಇದೆ. ಆದರೆ ಯಾವುದು ಅನುಷ್ಠಾನವಾಗಿಲ್ಲ, ಶಿಲಾನ್ಯಾಸವೂ ಆಗಿಲ್ಲ. ಈಗ ಕೇಂದ್ರದ ಸ್ಮಾರ್ಟ್‌ಸಿಟಿ ಅನುದಾನದಲ್ಲಿ ನಿರ್ಮಿಸಲಾದ ಜಿಲ್ಲಾಧಿಕಾರಿ ಕಚೇರಿ, ಸ್ಪೋಟ್ಸ್ ಕಾಂಪ್ಲೆಕ್ಸ್ ಉದ್ಘಾಟನೆಗೆ ಮುಖ್ಯಮಂತ್ರಿ ಬರುತ್ತಿದ್ದಾರೆ. ಈ ಬಗ್ಗೆ ನಮಗೆ ಖುಷಿಯಿದೆ, ಕೇಂದ್ರ ಸರಕಾರದ ಅನುದಾನದಲ್ಲಿ ಈ ಎರಡು ಯೋಜನೆಗಳು ಆಗಿವೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News