ಕೋಮುಹಿಂಸೆ ನಿಗ್ರಹಿಸಲು ಆಗ್ರಹಿಸಿ ಕರಾವಳಿಯ ಪ್ರಜ್ಞಾವಂತರಿಂದ ಮುಖ್ಯಮಂತ್ರಿಗೆ ಬಹಿರಂಗ ಪತ್ರ
ಸಿಎಂ ಸಿದ್ದರಾಮಯ್ಯ
ಮಂಗಳೂರು: ಕರಾವಳಿಯ ಅಭಿವೃದ್ಧಿ ಮತ್ತು ಅದಕ್ಕೆ ಮಾರಕವಾಗಿರುವ ಕೋಮುವಾದದ ನಿಯಂತ್ರಣ ಕ್ಕಾಗಿ ನಾಡಿನ ಪ್ರಜ್ಞಾವಂತರು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದಾಗಿರುವ ಅವಿಭಜಿತ ದ.ಕ.ದಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಕೋಮುವಾದ ಸರಕಾರದ ಗಮನಕ್ಕಿದೆ ಎಂದು ಭಾವಿಸುತ್ತೇವೆ. ಜಿಲ್ಲೆಯ ಜನರು ಈ ಕ್ಲೀಷೆಗೊಳಪಟ್ಟ ಅಭಿವೃದ್ದಿಯಿಂದ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಏರುಗತಿಯನ್ನು ಕಂಡಿಲ್ಲ. ಬದಲಾಗಿ ದಿನೇ ದಿನೇ ಕುಸಿತವನ್ನು ಕಾಣುತ್ತಿದೆ. ಜಿಲ್ಲೆಯ ಯುವ ಜನರು ಉದ್ಯೋಗಕ್ಕಾಗಿ ಊರೂರು ಅಲೆಯುವ ಪರಿಸ್ಥಿತಿ ಉಂಟಾಗಿದೆ. ಸ್ವಂತ ಊರಲ್ಲೊಂದು ಸೂರು ಬೇಕು ಎಂದು ಹೊರ ರಾಜ್ಯಗಳಲ್ಲಿ ದುಡಿಯುವ ಸ್ಥಿತಿ ಬಂದಿದೆ. ಜಿಲ್ಲೆಯಲ್ಲಿ ಎಲ್ಲವೂ ಇದ್ದು, ಜನಸಾಮಾನ್ಯರ ಕೈಗೆಟಕುವ ಆರ್ಥಿಕತೆಗಾಗಿ ವಲಸೆಯನ್ನು ನಂಬಬೇಕಾಗಿದೆ. ಕರಾವಳಿಯ ಲಕ್ಷಾಂತರ ಜನ ಸದ್ದಿಲ್ಲದ ಆಕರ್ಷಕ ವಲಸೆಗೆ ಒಳಗಾಗಿದ್ದಾರೆ. ಇದು ಪರಿಸರ, ವ್ಯವಸ್ಥೆಯ ಕಾರಣಕ್ಕಾಗಿ ನಡೆಯುವ ಬಲವಂತದ ವಲಸೆಯಂತೆ ಕ್ರೂರವಾಗಿ ದೃಶ್ಯದಲ್ಲಿ ಕಾಣದಿದ್ದರೂ ಆಳದಲ್ಲಿ ಕ್ರೂರ ಪರಿಣಾಮವನ್ನೇ ಬೀರುತ್ತದೆ. ಈ ರೀತಿಯ ವಲಸೆಯ ಆಕರ್ಷಣೆಗೆ ಮುಖ್ಯ ಕಾರಣ, ನಿರುದ್ಯೋಗ, ಉದ್ಯಮಗಳ ಕುಸಿತ ಮತ್ತು ಮುಖ್ಯವಾಗಿ ಕೋಮುವಾದ ಎಂಬುದು ಸ್ಪಷ್ಟ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಶಿಕ್ಷಣ, ಆರೋಗ್ಯ, ಹಣಕಾಸು, ಸಾರಿಗೆ ಇತ್ಯಾದಿ ಮೂಲಭೂತ ಸೌಲಭ್ಯಗಳನ್ನು ಸೃಷ್ಟಿಸಲು ಈ ಜಿಲ್ಲೆಯು ಸರಕಾರದ ನೆರವನ್ನು ಕಾದಿಲ್ಲ. ದಶಕಗಳಿಂದಲೇ ಈ ಎಲ್ಲ ಕ್ಷೇತ್ರಗಳಲ್ಲೂ ಇಲ್ಲಿನ ಶ್ರಮಿಕ ವರ್ಗಗಳು ತಕ್ಕಮಟ್ಟಿನ ಸೌಲಭ್ಯಗಳನ್ನು ಸೃಷ್ಟಿಸಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ದ.ಕ. ಜಿಲ್ಲೆ ಮುಂದುವರೆಯಲು ಮೇಲ್ನೋಟಕ್ಕೆ ಇಲ್ಲಿನ ಶ್ರೀಮಂತರು, ಮಠಗಳು, ಮೇಲ್ವರ್ಗಗಳು, ಧರ್ಮಾಧಿಕಾರಿಗಳು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಕಾರಣ ಎಂದು ಕಂಡು ಬಂದರೂ ಕೂಡ ವಾಸ್ತವವಾಗಿ ಇಲ್ಲಿನ ದುಡಿಯುವ ವರ್ಗದ ಕೌಶಲ್ಯತೆ ಅದಕ್ಕೆ ಕಾರಣ ಎಂಬುದು ನಿಸ್ಸಂಶಯವಾಗಿದೆ. ಇಲ್ಲಿನ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಶ್ರೀಮಂತರು ಮತ್ತು ಮಠಮಾನ್ಯಗಳ ಅಡಿಯಾಳಾಗಿದ್ದು, ಸರಕಾರಿ ವ್ಯವಸ್ಥೆಯೊಳಗೆ ಶಿಕ್ಷಣ, ಆರೋಗ್ಯವನ್ನು ತರಲು ಹಿಂಜರಿಯುತ್ತಿರುವುದು ಕರಾವಳಿಗೆ ಬಹುದೊಡ್ಡ ಏಟು ನೀಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕರಾವಳಿಯ ಖಾಸಗಿ ಶಿಕ್ಷಣ, ಆರೋಗ್ಯ ಮಾಫಿಯಾವನ್ನು ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.
ಕರಾವಳಿಯ ಕೋಮುವಾದದಲ್ಲಿ ಸರಕಾರಗಳ ಪಾಲು ದೊಡ್ಡದಿದೆ. ಕರಾವಳಿಯ ಕೈಗಾರಿಕೆಗಳಲ್ಲಿ ತುಳುನಾಡಿನ ಜನರಿಗೆ ಸೂಕ್ತ ಪ್ರಾತಿನಿದ್ಯ ಸಿಕ್ಕಿಲ್ಲ. ನೆಲ-ಜಲವನ್ನು ಬಳಕೆ ಮಾಡಿಕೊಂಡು, ರೈತರ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ತಲೆ ಎತ್ತಿರುವ ಒಎನ್‌ಜಿಸಿ, ಎಂಆರ್‌ಪಿಎಲ್‌ನಂತಹ ಕಾರ್ಖಾನೆ ಗಳು ಉತ್ತರ ಭಾರತೀಯರಿಗೆ ಉದ್ಯೋಗ ಕೊಡುವ ತಾಣವಾಗಿದೆ. ಕರಾವಳಿ ಎಲ್ಲರನ್ನೂ ಒಳಗೊಳ್ಳುವ, ತಬ್ಬಿಕೊಳ್ಳುವ ಸಂಸ್ಕೃತಿ ಇರುವ ಜಿಲ್ಲೆಯಾಗಿದೆ. ಆದರೆ ಉದ್ಯೋಗದಲ್ಲಿ ಕನಿಷ್ಠ ಅಧ್ಯತೆಯ ಪಾಲು ಸಿಗುವಂತಾಗಬೇಕು ಎಂದು ತಿಳಿಸಿದೆ.
ಕೇರಳ ಮಾದರಿಯಲ್ಲಿ ಕರಾವಳಿಯನ್ನು ಪ್ರವಾಸೋದ್ಯಮ ಕೇಂದ್ರವಾಗಿ ಬೆಳೆಸಬೇಕು. ಇಲ್ಲಿನ ನದಿ, ಸಮುದ್ರ, ಬೆಟ್ಟ ಗುಡ್ಡಗಳು, ದೇವಸ್ಥಾನ, ದೈವಸ್ಥಾನ, ಪಶ್ಚಿಮ ಘಟ್ಟ, ಐತಿಹಾಸಿಕ ಚರ್ಚ್, ಮಸೀದಿ, ಜೈನಬಸದಿಗಳನ್ನು ಬಳಸಿಕೊಂಡು ಪ್ರವಾಸೋದ್ಯಮ ರೂಪುಗೊಂಡರೆ ಸ್ಥಳಿಯ ನಿವಾಸಿಗಳಿಗೆ ಅದು ಆದಾಯದ ಮೂಲವಾಗಿ ಕೋಮುವಾದಕ್ಕೆ ಬೆಂಬಲ ಕೊಡುವುದನ್ನು ನಿಲ್ಲಿಸುತ್ತಾರೆ. ಹಾಗಾಗಿ ಸರಕಾರ ಗಳು ಈ ನಿಟ್ಟಿನಲ್ಲಿ ಕೆಲಸ ಮಾಡದಿರುವುದೇ ಕೋಮುವಾದ ಬೆಳವಣಿಗೆ ಹೊಂದಲು ಕಾರಣವಾಗಿದೆ.
ಕರಾವಳಿಯ ಜನಸಾಮಾನ್ಯರು ಮಾತ್ರವಲ್ಲದೆ ಸರಕಾರಿ ವ್ಯವಸ್ಥೆಯೇ ಕೋಮುವಾದೀಕರಣಗೊಂಡಿದೆ. ಕ್ಷುಲ್ಲಕ ವಿಷಯಗಳಿಗೆ ಅಲ್ಪಸಂಖ್ಯಾತರು, ದಲಿತರ ಮೇಲೆ ದಾಳಿಗಳಾಗುತ್ತಿದೆ. ಸಂತ್ರಸ್ತರ ಪರ ನಿಲ್ಲಬೇಕಾದ ಸರಕಾರಿ ವ್ಯವಸ್ಥೆಯು ಬಹುಸಂಖ್ಯಾತ ರಾಜಕಾರಣದ ಭಾಗವಾಗಿದೆ. ಈ ರೀತಿಯ ಬಹುಸಂಖ್ಯಾತ ರಾಜಕಾರಣದ ಕಾರಣಕ್ಕಾಗಿಯೇ ಕರಾವಳಿಯ ಕೋಮುವಾದದಲ್ಲಿ ಸ್ವ ಮತ್ತು ಅನ್ಯ ಕಲ್ಪನೆಗಳು ಹುಟ್ಟಿಕೊಂಡಿದೆ. ಇಲ್ಲಿನ ಬಹುಸಂಖ್ಯಾತರು ಸ್ವ ಮತಸ್ಥರು, ಇಲ್ಲಿನ ಅಲ್ಪಸಂಖ್ಯಾತರು ಅನ್ಯಮತೀಯರಾಗಿ ವ್ಯವಸ್ಥೆ/ಪ್ರಭುತ್ವಕ್ಕೆ ಕಾಣಿಸತೊಡಗಿದೆ. ಇದು ಕೋಮುವಾದವು ಕರಾವಳಿಯಲ್ಲಿ ಅಪಾಯದ ಗೆರೆಯನ್ನು ದಾಟಿರುವ ಸಂಕೇತವಾಗಿದೆ. ಈ ಕಾರಣಕ್ಕಾಗಿಯೇ ಮಾನಸಿಕ ಅಸ್ವಸ್ಥನಾಗಿದ್ದ ಕೇರಳದ ಅಶ್ರಫ್ ಎಂಬಾತನನ್ನು ೩೦ರಿಂದ ೫೦ರಷ್ಟಿದ್ದ ಯುವಕರ ಗುಂಪು ಮುಸ್ಲಿಮನೆಂಬ ಕಾರಣಕ್ಕಾಗಿ ಗುಂಪು ದಾಳಿ ಮಾಡಿ ಕೊಲೆ ಮಾಡುತ್ತದೆ. ಈ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಕ್ರೂರತೆ ಯನ್ನು ಪ್ರದರ್ಶಿಸುತ್ತಾರೆ. ಗುಂಪು ಹತ್ಯೆಯ ತಂಡದ ಭಾಗವೇ ಆಗಿರುವ ವ್ಯಕ್ತಿಗಳಿಂದ ದೂರು ಬರೆಸಿ ಕೊಂಡು ಮೊಕದ್ದಮೆ ದಾಖಲಿಸುವ, ಸಂತ್ರಸ್ತ ಪಾಕಿಸ್ತಾನ ಎಂದು ಕೂಗಿದ್ದ ಎಂದು ದೂರಿನಲ್ಲಿ ಸೇರಿಸುವ ಅಪಾಯಕಾರಿ ನಡೆಗಳು ಪೊಲೀಸರಿಂದಲೆ ನಡೆಯುತ್ತದೆ. ಘಟನೆ ನಡೆದು 36 ತಾಸುಗಳ ಕಾಲ ಪೊಲೀಸ್ ಇಲಾಖೆಯ ಮುಖ್ಯಸ್ಥರಾದ ಕಮಿಷನರ್ ಯಾವುದೇ ಕ್ರಮ ಜರುಗಿಸದೆ ಮೌನಕ್ಕೆ ಶರಣಾ ಗುತ್ತಾರೆ. ಈ ಗಂಭೀರ ಅಂಶಗಳನ್ನು ಒಳಗೊಂಡ ಘಟನೆಗೆ ಒರ್ವ ಪೊಲೀಸ್ ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಯನ್ನು ಅಮಾನತ್ತು ಮಾಡಿ ಸರಕಾರ ತನ್ನ ಕರ್ತವ್ಯದಿಂದ ಮುಕ್ತಗೊಂಡಿದೆ. ಈ ರೀತಿಯ ಅಪರಾಧವು ಸಾಮಾನ್ಯವಾಗಿ ದುರ್ಬಲ ಮತ್ತು ಅಂಚಿನಲ್ಲಿರುವ ಗುಂಪುಗಳ ವಿರುದ್ಧ ನಡೆಯುತ್ತದೆ. ಹಾಗಾಗಿ ಕಮಿಷನರ್ ದರ್ಜೆಯ ಅಧಿಕಾರಿಗಳನ್ನು ಮಾಬ್ ಲಿಂಚಿಂಗ್‌ಗೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಮಂಗಳೂರಿನ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ರಸ್ತೆಯಲ್ಲಿ ನಡೆದ ಅಶ್ರಫ್ ಎಂಬ ಮಾನಸಿಕ ಅಸ್ವಸ್ಥನ ಗುಂಪು ಹತ್ಯೆ ಪ್ರಕರಣದಲ್ಲಿ ರಾಜ್ಯ ಸರಕಾರವು ಸುಪ್ರಿಂಕೋರ್ಟ್ ನಿರ್ದೇಶನ ಗಳನ್ನು ಪಾಲಿಸಬೇಕು. ಅಂದರೆ ಒಂದು ತಿಂಗಳೊಳಗೆ ಗುಂಪು ಹತ್ಯೆಯ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಗಿಂತ ಕಡಿಮೆಯಿಲ್ಲದ ಅಧಿಕಾರಿಯನ್ನು ಪ್ರತ್ಯೇಕ ವಾಗಿ ನೋಡೆಲ್ ಅಧಿಕಾರಿಯಾಗಿ ನೇಮಿಸಬೇಕು. ದ್ವೇಷ ಭಾಷಣವನ್ನು ತಡೆಯಲು ಪ್ರತ್ಯೇಕ ವಿಶೇಷ ಕಾರ್ಯಪಡೆ ರಚಿಸಬೇಕು. ಗುಂಪು ಹತ್ಯೆ ಪ್ರಕರಣದ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪಿಸಬೇಕು ಮತ್ತು ಆರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸಬೇಕು. ಆರೋಪಿಗಳನ್ನು ನಿರ್ಧಿಷ್ಟ ಅವಧಿಯಲ್ಲಿ ಬಂಧಿಸಿ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಕರಾವಳಿಯ ಮತೀಯ ಸಂಘರ್ಷವನ್ನು ತಡೆಯಲು ನಕ್ಸಲ್ ನಿಗ್ರಹ ಪಡೆ ಮಾದರಿಯ ಕಾರ್ಯಪಡೆ ರಚಿಸಲಾಗುವುದು ಎಂದು ರಾಜ್ಯದ ಗೃಹ ಸಚಿವರು ಅಧಿಕೃತವಾಗಿ ಘೋಷಿಸಿದ್ದರು. ಇದು ಮೂರ್ಖತನದ ಪರಮಾವಧಿಯಾಗಿದೆ. ಕರಾವಳಿಯಲ್ಲಿ ಸೃಷ್ಟಿಯಾಗಿರುವುದು ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಬಿಕ್ಕಟ್ಟು. ಇಂತಹ ಬಿಕ್ಕಟ್ಟಿಗೆ ಬೇಕಿರುವುದು ರಾಜಕೀಯ ಪರಿಹಾರವೇ ಹೊರತು ಪೊಲೀಸರ ಮಧ್ಯಸ್ಥಿಕೆಯಲ್ಲ. ಆಡಳಿತ ಪಕ್ಷದ ನಾಯಕರುಗಳು ಕೋಮುವಾದಿಗಳನ್ನು ಸೃಷ್ಟಿಸುವ ಮಠಾಧೀಶರು, ಧರ್ಮಾಧಿಕಾರಿಗಳ ಕಾಲಾಳುಗಳಾಗಿದ್ದಾರೆ. ಕೋಮುವಾದದ ವಿರುದ್ಧ ಸೈದ್ಧಾಂತಿಕವಾಗಿ ಹೋರಾಟ ಮಾಡುತ್ತಿರುವ ಜಾತ್ಯತೀತ ರಾಜಕೀಯ ಕಾರ್ಯಕರ್ತರು, ಸ್ವತಂತ್ರ ಸಾಮಾಜಿಕ ಕಾರ್ಯಕರ್ತರು, ಬರಹಗಾರರು, ಚಿಂತಕರನ್ನು ಈ ಸರಕಾರ ಕರಾವಳಿಯಲ್ಲಿ ವೈರಿಗಳಂತೆ ಕಾಣುತ್ತಿದೆ. ಕೋಮುವಾದಿಗಳ ಮೇಲೆ ಪ್ರಕರಣ ದಾಖಲಿಸುವ ಬದಲು ಕೋಮುವಾದದ ವಿರೋಧಿಗಳ ಮೇಲೆ ಪೊಲೀಸ್ ಇಲಾಖೆ ಎಫ್‌ಐಆರ್‌ಗಳ ಮೇಲೆ ಎಫ್‌ಐಆರ್ ದಾಖಲಿಸುತ್ತದೆ. ಇದನ್ನು ಸರಕಾರದ ಗಮನಕ್ಕೆ ತಂದರೂ ಕರಾವಳಿಯ ಪೊಲೀಸ್ ಇಲಾಖೆಯ ಅಮೂಲಾಗ್ರ ಬದಲಾವಣೆ ಇನ್ನೂ ಸಾಧ್ಯವಾಗಿಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
2023ರಿಂದ 2024ರ ಮಧ್ಯೆ 114 ಕೋಮುಹಿಂಸೆ ಪ್ರಕರಣಗಳು ಕರಾವಳಿಯಲ್ಲಿ ನಡೆದಿದೆ. ಕಳೆದ ಹತ್ತು ವರ್ಷಗಳ ಕೋಮು ಹಿಂಸೆಗಳ ಗಣತಿಯನ್ನು ಮಾಡಿದರೆ ಕರಾವಳಿಯ ಕೋಮು ಹಿಂಸೆಯ ಭಯಾನಕತೆ ಅರಿವಿಗೆ ಬರುತ್ತದೆ. ಇದರ ತಡೆಗೆ ಸರಕಾರದ ಬಳಿ ಇರುವ ಯೋಜನೆಗಳೇನು ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗೆ ಬರೆದ ಮನವಿ ಪತ್ರಕ್ಕೆ ಪ್ರೊ. ನರೇಂದ್ರ ನಾಯಕ್, ಡಾ. ಗಣನಾಥ ಶೆಟ್ಟಿ ಎಕ್ಕಾರು, ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪ್ರೊ. ಫಣಿರಾಜ್, ಡಾ. ಪೂವಪ್ಪಕಣಿಯೂರು, ಡಾ. ಎನ್. ಇಸ್ಮಾಯಿಲ್, ಡಾ. ಕೃಷ್ಣಪ್ಪಕೊಂಚಾಡಿ, ವಾಸುದೇವ ಉಚ್ಚಿಲ, ಚಂದ್ರಕಲಾ ನಂದಾವರ, ಮುನೀರ್ ಕಾಟಿಪಳ್ಳ, ಅತ್ರಾಡಿ ಅಮೃತಾ ಶೆಟ್ಟಿ, ಐ.ಕೆ. ಬೊಳವಾರು, ನವೀನ್ ಸೂರಿಂಜೆ, ಸ್ವರ್ಣಾ ಭಟ್, ಗುಲಾಬಿ ಬಿಳಿಮಲೆ, ಉದ್ಯಾವರ ನಾಗೇಶ ಕುಮಾರ್, ಸಂತೋಷ್ ಶೆಟ್ಟಿ ಹಿರಿಯಡ್ಕ, ಯಶವಂತ ಮರೋಳಿ, ಶ್ರೀನಿವಾಸ ಕಾರ್ಕಳ, ಪ್ರಕಾಶ್ ನೊರೊನ್ಹ ಪಾಂಬೂರು ಸಹಿ ಹಾಕಿದ್ದಾರೆ.