ಮಂಗಳೂರು: ಕಬಡ್ಡಿ, ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸ್ಮಾರ್ಟ್‌ಸಿಟಿ ಮಂಗಳೂರು ಇವರ ಆಶ್ರಯದಲ್ಲಿ ಸುಮಾರು 36 ಕೋಟಿ ರೂ. ವೆಚ್ಚದಲ್ಲಿ ಉರ್ವದಲ್ಲಿ ನಿರ್ಮಾಣಗೊಂಡ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಯನ್ನು ಶುಕ್ರವಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ನೆರವೇರಿಸಿದರು.
ನಿಗದಿತ ಕಾರ್ಯಕ್ರಮದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ವಿಮಾನ ನಿಲ್ದಾಣ ದಿಂದ ಮೊದಲು ಈ ಒಳಾಂಗಣ ಕ್ರೀಡಾಂಗಣ ಲೋಕಾರ್ಪಣೆಗೊಳಿಸಬೇಕಿತ್ತು. ಪೂರ್ವನಿಗದಿಯಂತೆ ಸಂಜೆ 3.30ಕ್ಕೆ ಮುಖ್ಯಮಂತ್ರಿಗಳು ಉರ್ವಕ್ಕೆ ಆಗಮಿಸಬೇಕಿತ್ತು. ಆದರೆ ಮುಖ್ಯಮಂತ್ರಿಗಳು ಬಳ್ಳಾರಿಯಿಂದ ಹೊರಡುವಾಗಲೇ 45 ನಿಮಿಷ ತಡವಾಗಿತ್ತು. ಹಾಗಾಗಿ ಸಂಜೆ 4.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ವಿಳಂಬವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ವಿವಿಧ ತಾಲೂಕುಗಳಿಂದ ವಿವಿಧ ಸೌಲಭ್ಯಗಳ ಫಲಾನೂಭವಿಗಳೂ ಆಗಮಿಸಿದ್ದರಿಂದ ನೇರವಾಗಿ ವಿಮಾನ ನಿಲ್ದಾಣದಿಂದ ಪಡೀಲಿನಲ್ಲಿ ಹೊಸ ಡಿಸಿ ಕಚೇರಿ ಸಂಕೀರ್ಣ ಲೋಕಾರ್ಪಣೆಗೆ ತೆರಳಿ ಅಲ್ಲಿಯ ಕಾರ್ಯಕ್ರಮದ ಬಳಿಕ ಉರ್ವಾ ಒಳಾಂಗಣ ಕ್ರೀಡಾಂಗಣದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭ ಸ್ಪೀಕರ್ ಯು.ಟಿ. ಖಾದರ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಜಿಲ್ಲಾಧಿಕಾರಿ ಮಲೈ ಮುಗಿಲನ್, ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.