×
Ad

ಹಿಂದುತ್ವವಾದಿಗಳ ಟೀಕೆಗಳಿಗೆ ಎದೆಗುಂದಲ್ಲ: ಸಿಎಂ ಸಿದ್ದರಾಮಯ್ಯ

Update: 2025-05-16 22:29 IST

ಮಂಗಳೂರು: ಬಹುಸಂಸ್ಕೃತಿಯ ನಾಡಾದ ಕರ್ನಾಟಕದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಸರಕಾರ ನಡೆಸಲಾಗುತ್ತದೆ. ಸರ್ವರನ್ನೂ ಸಮಾನವಾಗಿ ಕಾಣಲಾಗುತ್ತದೆ. ಇದರಿಂದ ವಿಚಲಿತರಾಗಿರುವ ಹಿಂದುತ್ವವಾದಿಗಳು ನನ್ನ ವಿರುದ್ಧ ವೈಯಕ್ತಿಕ ಟೀಕೆಗಳನ್ನೂ ಮಾಡುತ್ತಿದ್ದಾರೆ. ಆದರೆ ತಾನು ಎಂದೂ ಕೂಡ ಇಂತಹ ಟೀಕೆಗಳಿಗೆ ಎದೆಗುಂದುವುದಿಲ್ಲ. ಸಂವಿಧಾನ ಬದ್ಧವಾಗಿಯೇ ಆಡಳಿತ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಉಳ್ಳಾಲ ಸೈಯದ್ ಮದನಿ ದರ್ಗಾದ 22ನೆ ಪಂಚವಾರ್ಷಿಕ ಉರೂಸ್ ಪ್ರಯುಕ್ತ ದರ್ಗಾ ವಠಾರದಲ್ಲಿ ಶುಕ್ರವಾರ ನಡೆದ ಸಾಮಾಜಿಕ ಭಾವೈಕ್ಯತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.


ಸುಮಾರು 7 ಕೋಟಿ ಜನಸಂಖ್ಯೆ ಇರುವ ಕರ್ನಾಟಕದಲ್ಲಿ ನಾನಾ ಜಾತಿ, ಧರ್ಮ, ಭಾಷೆ, ಸಂಸ್ಕೃತಿಯ ಜನರಿದ್ದಾರೆ‌‌. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವುದು ನಮ್ಮ ಸರಕಾರದ ಜವಾಬ್ದಾರಿಯಾಗಿದೆ. ಸಂವಿಧಾನ ಬದ್ಧವಾಗಿ ಅಧಿಕಾರ ವಹಿಸಿಕೊಂಡ ನಾವು ಅದರಂತೆ ಆಡಳಿತ ನಡೆಸುತ್ತಿದ್ದೇವೆ. ಮನುಷ್ಯರನ್ನು ದ್ವೇಷಿಸದೆ ಪ್ರೀತಿಸುತ್ತಿದ್ದೇವೆ. ಸಾಮಾಜಿಕ ನ್ಯಾಯ ಕೊಡುತ್ತಿದ್ದೇವೆ. ಸಮಾಜದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ಸೃಷ್ಟಿಸುತ್ತಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತಿದ್ದೇವೆ. ಆದರೆ ಇದನ್ನು ಮತೀಯ ಶಕ್ತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸಮಾಜದಲ್ಲಿ ಅಶಾಂತಿಗೆ ಪ್ರಯತ್ನಿಸುತ್ತಿದೆ. ಇಂತಹ ಯಾವುದೇ ಷಡ್ಯಂತ್ರಗಳಿಗೆ ಸರಕಾರ ಹೆದರುವುದಿಲ್ಲ. ಈಗಾಗಲೇ ಜನರಿಗೆ ನೀಡುತ್ತಿರುವ ಗ್ಯಾರಂಟಿ ಯೋಜನೆಗಳಿಂದಲೂ ನಾವು ವಿಮುಖರಾಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.


ಸಭೆಯ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಖಾಝಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ‌. ಅಬೂಬಕರ್ ಮುಸ್ಲಿಯಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಈ ಹಿಂದೆ 5 ವರ್ಷ ಉತ್ತಮ ಆಡಳಿತ ನೀಡಿದ ಕಾರಣದಿಂದಲೇ ಇದೀಗ ಎರಡನೇ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕೊಂಡಾಡಿದ ಎ.ಪಿ. ಉಸ್ತಾದ್ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಸೇವೆ ನೀಡಲಿ ಎಂದು ಆಶಿಸಿದರು.


ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಉಳ್ಳಾಲವು ಕೇವಲ ಧಾರ್ಮಿಕ ಕೇಂದ್ರವಲ್ಲ‌. ಮತ ಸೌಹಾರ್ದದ ಕೇಂದ್ರವಾಗಿದೆ. ಹಾಗಾಗಿಯೇ ಇಲ್ಲಿ ದಿನನಿತ್ಯ ಎಲ್ಲಾ ಸಮುದಾಯದ ಜನರು ಪ್ರಾರ್ಥನೆ ಸಲ್ಲಿಸಲು ಆಗಮಿಸುತ್ತಿದ್ದಾರೆ. ಅದನ್ನು ಗಮನಿಸಿ ಸರಕಾರವು ಉರೂಸ್‌ಗೆ ವಿಶೇಷ ಅನುದಾನ ಬಿಡುಗಡೆ ಮಾಡಿದೆ. ಅದಲ್ಲದೆ ಉಳ್ಳಾಲ (ಮಂಗಳೂರು) ಕ್ಷೇತ್ರದ ಅಭಿವೃದ್ಧಿಗೆ 1 ಸಾವಿರ ಕೋ‌.ರೂ. ಅನುದಾನ ನೀಡಿದೆ‌. ಅದಕ್ಕಾಗಿ ತಾನು ಮುಖ್ಯಮಂತ್ರಿ ಮತ್ತು ಸಚಿವರನ್ನು ಅಭಿನಂದಿಸುತ್ತೇನೆ ಎಂದರು.


ಕಾರ್ಯಕ್ರಮದಲ್ಲಿ ರಾಜ್ಯದ ಅತೀ ದೊಡ್ಡ ಮಸೀದಿ ಉಳ್ಳಾಲ ಗ್ರ್ಯಾಂಡ್ ಜುಮಾ ಮಸ್ಜಿದ್‌ನ ನೀಲನಕ್ಷೆ ಅನಾವರಣಗೊಳಿಸಲಾಯಿತು.

ಕಡಲುಂಡಿ ಖಲೀಲುಲ್ ಇಬ್ರಾಹಿಂ ಬುಖಾರಿ ತಂಙಳ್ ಮತ್ತು ಮುನವ್ವರ್ ಅಲಿ ಶಿಹಾಬ್ ಅಲಿ ತಂಙಳ್ ಮಾತನಾಡಿದರು. ಸೈಯದ್ ಆಟಕ್ಕೋಯ ತಂಙಳ್ ಕುಂಬೋಳ್ ದುಆಗೈದರು. ಉಳ್ಳಾಲ ದರ್ಗಾ ಅಧ್ಯಕ್ಷ ಬಿ.ಜಿ. ಹನೀಫ್ ಹಾಜಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.


ವೇದಿಕೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವರಾದ ರಹೀಂ ಖಾನ್, ಬೈರತಿ ಸುರೇಶ್, ಕೃಷ್ಣಭೈರೇಗೌಡ, ಮುಖ್ಯಮಂತ್ರಿಯ ರಾಜಕೀಯ ‌ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕರಾದ ಅಶೋಕ್ ರೈ ಪುತ್ತೂರು, ಐವನ್ ಡಿಸೋಜ, ಎ.ಕೆ.ಎಂ. ಅಶ್ರಫ್, ಮಾಜಿ ಸಚಿವರಾದ ಸಿ‌.ಎಂ. ಇಬ್ರಾಹೀಂ, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಯೆನೆಪೋಯ ವಿವಿಯ ಕುಲಾಧಿಪತಿ ಡಾ. ವೈ ಅಬ್ದುಲ್ಲಾ ಕುಂಞಿ, ಉಳ್ಳಾಲ ದರ್ಗಾದ ಮಾಜಿ ಅಧ್ಯಕ್ಷ ಡಾ. ಕಣಚೂರು ಮೋನು, ಡಾ. ಯು.ಟಿ. ಇಫ್ತಿಕಾರ್ ಅಲಿ, ಹಾಮಿದ್ ಇಂಬಿಚ್ಚಿಕೋಯ ತಂಙಳ್, ಮಶ್ಹೂದ್ ತಂಙಳ್, ಶಾಫಿ ಸ‌ಅದಿ ಬೆಂಗಳೂರು, ಅಬ್ದುರ್ರಶೀದ್ ಝೈನಿ, ಬೆಂಗಳೂರು ಬಿಬಿಎಂಪಿ ವಿಪಕ್ಷ ನಾಯಕ ಉಬೈದುಲ್ಲಾ, ಉದ್ಯಮಿ ಮುಸ್ತಾಕ್ ಖಾದಿರ್, ಇನಾಯತ್ ಅಲಿ ಮುಲ್ಕಿ, ನಾಸಿರ್ ಲಕ್ಕಿಸ್ಟಾರ್, ಎಸ್.ಎಂ‌. ರಶೀದ್ ಹಾಜಿ, ಶಾಹುಲ್ ಹಮೀದ್ ಕೆ‌.ಕೆ‌. ಮತ್ತಿತರರು ಉಪಸ್ಥಿತರಿದ್ದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News