ಎಜುಕೇಶನಲ್ ಹೆಲ್ಪ್‌ಡೆಸ್ಕ್‌ನಿಂದ ವ್ಯಕ್ತಿತ್ವ ವಿಕಸನ ಶಿಬಿರ, ಸಾಧಕರಿಗೆ ಸನ್ಮಾನ
ಬೆಳ್ತಂಗಡಿ: ಎಜುಕೇಶನಲ್ ಹೆಲ್ಪ್‌ಡೆಸ್ಕ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರ ಶನಿವಾರ ಪೂಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.
ಮಂಗಳೂರಿನ ತರಬೇತುದಾರ ರಫೀಕ್ ಮಾಸ್ಟರ್ ವೃತ್ತಿಪರ ಮಾರ್ಗದರ್ಶನ, ಪಠ್ಯ ಆಯ್ಕೆ, ಕೋರ್ಸ್ ಮಾಹಿತಿ ಮತ್ತು ವ್ಯಾಸಂಗದ ನಿರ್ಧಾರಗಳ ಕುರಿತು ಮಾರ್ಗದರ್ಶನ ನೀಡಿದರು. ಹೈಲ್ಯಾಂಡ್ ಆಸ್ಪತ್ರೆಯ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಈ ಸಂದರ್ಭ ಎಸೆಸೆಲ್ಸಿ, ಪಿಯುಸಿ ಹಾಗೂ ಮದ್ರಸ ಪಬ್ಲಿಕ್ ಪರೀಕ್ಷೆಗಳಲ್ಲಿ ಉನ್ನತ ಅಂಕ ಪಡೆದ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾಯಿತು. ವಿಶೇಷವಾಗಿ ಪ್ಯಾರಾ ಮೆಡಿಕಲ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಮರ್ಯಮ್ ಬೀವಿ ಅವರನ್ನು ಗೌರವಿಸಲಾಯಿತು.
ಅಲ್ಲದೆ 150ಕ್ಕೂ ಹೆಚ್ಚು ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ 265ಕ್ಕೂ ಹೆಚ್ಚು ಮದ್ರಸಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಸ್ಥಳೀಯ ಐದು ಅಂಗನವಾಡಿ ಕೇಂದ್ರಗಳಿಗೆ ಐದು ಕೂಲರ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಜುಕೇಶನಲ್ ಹೆಲ್ಪ್‌ಡೆಸ್ಕ್ ತಂಡದ ಸದಸ್ಯರು, ಉಲಮಾ, ಉಮರಾ ನೇತಾರರು ಉಪಸ್ಥಿತರಿದ್ದರು.