×
Ad

ವಿದೇಶಕ್ಕೆ ತೆರಳಿದ ಸರ್ವ ಪಕ್ಷಗಳ ನಿಯೋಗದಲ್ಲಿ ಭಾಗಿ: ಮಂಗಳೂರಿಗೆ ವಾಪಾಸಾದ ಸಂಸದರಿಗೆ ಅಭಿನಂದನೆ

Update: 2025-06-04 17:55 IST

ಮಂಗಳೂರು: ಅಪರೇಶನ್ ಸಿಂದೂರ ಹಿನ್ನೆಲೆಯಲ್ಲಿ ವಿದೇಶಗಳಿಗೆ ತೆರಳಿದ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸಿ ಮಂಗಳೂರಿಗೆ ಆಗಮಿಸಿದ ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಅಭಿನಂದನಾ ಕಾರ್ಯಕ್ರಮ ನೆರವೇರಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಂಸದರು, ಆಪರೇಶನ್ ಸಿಂದೂರ ಮೂಲಕ ವಿಶ್ವದ ಯಾವುದೇ ದೇಶ ಮಾಡದ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಮಾಡಿದೆ. ವೃತ್ತಿಪರತೆಯುಳ್ಳ ಸೇನೆ, ಪ್ರಧಾನಿ ಮೋದಿ ಅವರ ಜವಾಬ್ದಾರಿಯುತ ನಾಯಕತ್ವದಿಂದ ಈ ಯಶಸ್ವಿ ಕಾರ್ಯಾಚರಣೆ ಸಾಧ್ಯವಾಗಿದೆ ಎಂದರು.

ಮುಂದಕ್ಕೆ ದೇಶದಲ್ಲಿ ಭಯೋತ್ಪಾದನಾ ಕೃತ್ಯ ನಡೆದರೆ ಭಾರತ ಸೂಕ್ತ ಉತ್ತರ ನೀಡಲಿದೆ. ಅದರ ಭಾಗವಾಗಿ ಆಪರೇಶನ್ ಸಿಂದೂರ ನಡೆಸಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ಭಾರತದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆಯ ಅಸಲಿಯತ್ತನ್ನು ಜಗತ್ತಿಗೆ ಮನವರಿಕೆ ಮಾಡುವಲ್ಲಿ ವಿದೇಶಕ್ಕೆ ತೆರಳಿದ ಭಾರತದ ಸರ್ವಪಕ್ಷಗಳ ನಿಯೋಗ ಯಶಸ್ವಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ವಿದೇಶಕ್ಕೆ ತೆರಳಿದ ಸರ್ವಪಕ್ಷಗಳ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದರಿಗೆ ಅವಕಾಶ ದೊರೆತಿರುವುದು ಜಿಲ್ಲೆಗೆ ಗೌರವ ತಂದುಕೊಟ್ಟಿದೆ. ಚೌಟ ಅವರ ಸಾಮರ್ಥ್ಯವನ್ನು ಗುರುತಿಸಿ ಕೇಂದ್ರ ಸರಕಾರ ಈ ಅವಕಾಶ ನೀಡಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ. ಹಿಂದು ಕಾರ್ಯಕರ್ತರನ್ನು ಬೆದರಿಸುವ ಮೂಲಕ ಹಿಂದುತ್ವದ ಭದ್ರಕೋಟೆಯನ್ನು ಒಡೆಯುವ ಪ್ರಯತ್ನವನ್ನು ರಾಜ್ಯ ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಯಾವುದೇ ಹತ್ಯೆಯನ್ನು ನಾವು ಸಮರ್ಥಿಸುವುದಿಲ್ಲ. ಆದರೆ, ಹಿಂದುಗಳನ್ನು ಪೊಲೀಸರು ಗುರಿಯಾಗಿಸಿ ಕೊಂಡಿರುವುದನ್ನು ಸಹಿಸುವುದಿಲ್ಲ. ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ, ಗೋಹತ್ಯೆ, ಲವ್ ಜಿಹಾದ್ ನಿಲ್ಲಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಜಿಲ್ಲೆಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.

ಅಭಿನಂದನಾ ಭಾಷಣ ಮಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಗಣೇಶ್ ಕಾರ್ಣಿಕ್, ವಿದೇಶಕ್ಕೆ ನುಗ್ಗಿ ಹೊಡೆಯುವ ಸಾಮರ್ಥ್ಯ ಭಾರತೀಯ ಸೇನೆಗೆ ಇದೆ ಎಂಬುದು ಆಪರೇಶನ್ ಸಿಂದೂರ ಮೂಲಕ ಸಾಬೀತಾಗಿದೆ. ಸರ್ವಪಕ್ಷಗಳ ನಿಯೋಗದಲ್ಲಿ ನಮ್ಮ ಸಂಸದರು ಭಾಗವಹಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್, ಕಿಶೋರ್‌ಕುಮಾರ್ ಪುತ್ತೂರು, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸುನೀಲ್ ಆಳ್ವ ಸ್ವಾಗತಿಸಿದರು. ಪೂಜಾ ಪೈ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News