×
Ad

ಕೆಪಿಸಿಸಿ ನಿಯೋಗದಿಂದ ಕರಾವಳಿಯ ಮೂರು ಜಿಲ್ಲೆಗಳ ಬಗ್ಗೆ ಅಧ್ಯಯನ: ಡಾ.ಮಂಜುನಾಥ ಭಂಡಾರಿ

Update: 2025-06-04 20:32 IST

ಮಂಗಳೂರು: ಕರಾವಳಿಯ ಮಂಗಳೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆ ಹಿಂದೆ ಸಾಮಾಜಿಕ ವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃಕವಾಗಿ ಹೇಗಿತ್ತು ? ಈಗ ಈ ಮೂರು ಜಿಲ್ಲೆಗಳಲ್ಲಿ ಸ್ಥಿತಿ ಯಾವ ರೀತಿ ಇದೆ ಹೇಗಿದೆ ಎಂದು ಅಧ್ಯಯನ ಮಾಡಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೇಮಕ ಮಾಡಿರುವ ಏಳು ಮಂದಿಯ ಕೆಪಿಸಿಸಿ ನಿಯೋಗವು ಜೂ.5ರಂದು ದ.ಕ. ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ನಿಯೋಗದ ಸದಸ್ಯರಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ತಿಳಿಸಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮೊಂದಿಗೆ ಈ ಸಮಿತಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಜ್ಯಸಭಾ ಸದಸ್ಯ ಡಾ.ಸೈಯ್ಯದ್ ನಾಸೀರ್ ಹುಸೈನ್, ಎಐಸಿಸಿ ಕಾರ್ಯದರ್ಶಿ ಕೇರಳದ ರೋಜಿ ಜಾನ್, ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ.ಹಾರೀಸ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕೆಪಿಸಿಸಿ ಉಪಾಧ್ಯಕ್ಷ ಸುದರ್ಶನ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಈ ಸಮಿತಿಯ ಸದಸ್ಯರಾಗಿರುತ್ತಾರೆ ಎಂದು ಮಾಹಿತಿ ನೀಡಿದರು.

ನಿಯೋಗವು ಗುರುವಾರ(ಜೂ.4) ಆರಂಭಗೊಳ್ಳುವ ಎರಡು ದಿನಗಳ ಪ್ರವಾಸದಲ್ಲಿ ಬೆಳಗ್ಗೆ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು , ಮುಂಚೋಣಿ ಘಟಕದ ಪ್ರಮುಖರು, ಶಾಸಕರು, ಮಾಜಿ ಶಾಸಕರು , ಮಾಜಿ ಸಚಿವರ ಜತೆ ಚರ್ಚೆ ನಡೆಸಲಿದೆ. ಜಿಲ್ಲಾಧಿಕಾರಿ, ಮನಪಾ ಆಯುಕ್ತರು, ಜಿಲ್ಲಾ ಎಸ್ಪಿ, ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮಾತುಕತೆ ನಡೆಸಲಿದೆ. ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದವರನ್ನು , ವಿವಿಧ ಸಂಘಟನೆಯ ಮುಖಂಡರನ್ನು, ಧಾರ್ಮಿಕ ಮುಖಂಡರನ್ನು ನಿಯೋಗವು ಭೇಟಿಯಾಗಿ ಚರ್ಚೆ ನಡೆಸಲಿದೆ. ಬಳಿಕ ಜೂ.9-11 ರಂದು ಮತ್ತೆ ಮೂರು ಜಿಲ್ಲೆಗಳಲ್ಲಿ ಇದೇ ಸಮಿತಿಯ ಸದಸ್ಯರು ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ. ಕರಾವಳಿಯಲ್ಲಿ ಶಾಂತಿ ನೆಲೆಗೊಳಿಸುವ ನಿಟ್ಟಿನಲ್ಲಿ, ಸಾಮಾಜಿಕ,ಆರ್ಥಿಕ ಬೆಳವಣಿಗೆಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಅಧ್ಯಯನ ವರದಿ ತಯಾರಿಸಿ ಪಕ್ಷದ ವರಿಷ್ಠರ ಮೂಲಕ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು

ಒಂದೊಮ್ಮೆ ದ.ಕ. ಜಿಲ್ಲೆ ಆರ್ಥಿಕತೆಯ ಬುನಾದಿಯಾಗಿತ್ತು. ಐದಾರು ಬ್ಯಾಂಕ್ ಇತ್ತು, ಹೋಟೆಲ್ ಉದ್ಯಮದಲ್ಲಿ ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿತ್ತು. ಶೈಕ್ಷಣಿಕವಾಗಿ ಹಲವಾರು ಮೆಡಿಕಲ್, ಇಂಜಿನಿಯ ರಿಂಗ್ ಕಾಲೇಜು ಇಲ್ಲಿವೆ. ಇಲ್ಲಿ ಇರುವಷ್ಟು ಮೆಡಿಕಲ್ ಕಾಲೇಜು ದೇಶದ ಯಾವುದೇ ಜಿಲ್ಲೆಯಲ್ಲಿ ಇಲ್ಲ. ಈ ಜಿಲ್ಲೆಯಲ್ಲಿ ಪ್ರತಿವರ್ಷ ೧೫ ಸಾವಿರ ಇಂಜಿನಿಯರ್‌ಗಳನ್ನು ದೇಶಕ್ಕೆ ಸಮರ್ಪಿಸುತ್ತದೆ. ಇಂತಹ ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಯಾವ ರೀತಿಯಲ್ಲಿ ಮಾಡಬೇಕು ಎನ್ನುವ ಬಗ್ಗೆ ಸರಕಾರ ಚಿಂತನೆ ನಡೆಸಿ ಈ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ ಎಂದರು.

ನೆಲಮಾರ್ಗ , ಜಲಮಾರ್ಗ, ವಾಯುಮಾರ್ಗ ಸಂಪರ್ಕ ವ್ಯವಸ್ಥೆ ಇರುವ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ವಾಗಿದೆ. ಬುದ್ಧಿವಂತರ ಜಿಲ್ಲೆಯಾಗಿರುವ ಇಲ್ಲಿ ಒಂದು ಸಣ್ಣ ಘಟನೆ ನಡೆದರೆ ಅದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದು ಘಟನೆ ನಡೆದಾಗ ಅಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸ್ ಅಧಿಕಾರಿಗಳನ್ನು ಬದಲಾಯಿಸುವುದು ಸಹಜ ಪ್ರಕ್ರಿಯೆ. ಗಲಾಟೆ ನಿಯಂತ್ರಿಸಲು ಸರಕಾರ ವಿಫಲವಾ ದಾಗ ಸರಕಾರನ್ನು ಪ್ರಶ್ನಿಸುವ ಅಧಿಕಾರ ವಿಪಕ್ಷಕ್ಕೆ ಇದೆ. ಆದರೆ ವಿಪಕ್ಷ ಬಿಜೆಪಿ ಮಾತ್ರ ದ್ವಂಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

‘ಹಿಂದೂ ಮುಖಂಡ’ ಎನ್ನಲು ಯಾರ್ರಿ ಅಧಿಕಾರ ಕೊಟ್ಟವರು: ಇತ್ತೀಚಿನ ದಿನಗಳಲ್ಲಿ ಒಬ್ಬ ಹಿಂದೂ ಸಮುದಾಯಕ್ಕೆ ಸೇರಿದ ಒಬ್ಬ ಹತ್ಯೆಯಾದರೆ ಹಿಂದೂ ನಾಯಕನ ಹತ್ಯೆ, ಮುಸ್ಲಿಂನಾದರೆ ಮುಸ್ಲಿಂ ಮುಖಂಡನ ಹತ್ಯೆ ಎಂದು ಬಿಂಬಿಸಲಾಗುತ್ತದೆ. ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಹಾಗಿದ್ದರೆ ಹಿಂದೂ ನಾಯಕ ಯಾರು ಎಂದು ಡಾ. ಮಂಜುನಾಥ ಭಂಡಾರಿ ಪ್ರಶ್ನಿಸಿದರು.

ಹಿಂದೂ ಕಾರ್ಯಕರ್ತ ಅಂದರೆ ಯಾರು? ಮಂಜುನಾಥ ಭಂಡಾರಿ ಹಿಂದು ಅಲ್ಲವೆ ? ಇಲ್ಲಿ ಕುಳಿತಿರುವ ವರುವ ಹಿಂದುಗಳಲ್ಲವೇ ? ‘ಹಿಂದೂ ಮುಖಂಡ’ ಎನ್ನಲು ಯಾರ್ರಿ ಅವರಿಗೆ ಅಧಿಕಾರ ಕೊಟ್ಟವರು. ಮುಸ್ಲಿಂ ನಾಯಕ ಎಂದರೆ ಅವರೊಬ್ಬರೆ ಮುಸ್ಲಿಮ್ ನಾಯಕನಾ? ಹಿಂದೂ ನಾಯಕನ ಹತ್ಯೆ ಎಂದು ಹೇಳಿದರೆ ಹತ್ಯೆ ಮಾಡಿದವರು ಯಾರು? ಹತ್ಯೆಯಾದವರು ಯಾರೆಂದು ತಿಳಿದುಕೊಳ್ಳಬೇಕಲ್ಲವೇ? ಹಿಂದೂ ನಾಯಕನಾಗಲು ಆತ ರೌಡಿಶೀಟರ್ ಆಗಿರಬೇಕೆ ? ಅಕ್ರಮ ಮರಳುಗಾರಿಕೆ ಮಾಡಿರಬೇಕಾ ? ಗಾಂಜಾ ಸಾಗಾಟ ಮಾಡಿರಬೇಕಾ,ಅನೈತಿಕಾ ಚಟುವಟಿಕೆ ನಡೆಸಿರಬೇಕಾ ? ಇಂತವರನ್ನು ಹಿಂದೂ ನಾಯಕರೆಂದು ಕರೆದರೆ ಮಠಾಧೀಶರನ್ನು ಏನೆಂದು ಕರೆಯಬೇಕು. ಮಠಾಧೀಶರು ಹಿಂದುಗಳಲ್ಲವೆ? ಅವರ ಕೆಲಸ ಏನು ? ಎಂದು ಪ್ರಶ್ನಿಸಿದರು.

*ಬಿಜೆಪಿ ಕೋಮು ವಿಷ ಬೀಜ ಬಿತ್ತುತ್ತಿದೆ: ಕೋಮು ದ್ವೇಷದ ವಿಷ ಬೀಜವನ್ನು ಬಿತ್ತುವುದು ಮಾತ್ರ ಬಿಜೆಪಿ ಕೆಲಸ ಆಗಿದೆ. ಅವರಿಗೆ ಸೌಜನ್ಯತೆ ಇದ್ದರೆ,ಹಿಂದೂ ಧರ್ಮದ ಬಗ್ಗೆ ನಂಬಿಕೆ ಇದ್ದರೆ ‘ಹಿಂದೂ’ ಎಂದು ಬಿಂಬಿಸುವುದನ್ನು ಬಿಟ್ಟು ಹತ್ಯೆಯಾದವರು ಯಾವ ದಳದಿಂದ ಬಂದವರೆಂದು ಹೇಳಲಿ. ಹಿಂದೂ ನಾಯಕನ ಬಂಧನ ?, ಹಿಂದೂ ನಾಯಕನ ಹತ್ಯೆ ಎನ್ನುವುದನ್ನು ಬಿಡಲಿ. ಗಡಿಪಾರು ಆದವರು, ಕೇಸ್‌ಗಳಿರುವವರಿಗೆ ಹಿಂದೂ ನಾಯಕನ ಪಟ್ಟ ಕಟ್ಟುವುದು ಬೇಡ. ಕೇಸರಿ ಬಣ್ಣದ ವಸ್ತ್ರ ಧರಿಸಿದ ತಕ್ಷಣ ಆತ ಹಿಂದೂ ನಾಯಕ ಆಗಲ್ಲ. ಕೊಲೆಗಡುಕರಿಗೆ ಹಿಂದೂ ನಾಯಕ ಪಟ್ಟ ಕಟ್ಟುವುದು ಬೇಡ ಎಂದು ಗುಡುಗಿದರು.

ಹತ್ಯೆಗೆ ಪ್ರಚೋದನೆ ನೀಡಿದವರಿಗೆ ಶಿಕ್ಷೆಯಾಗಲಿ: ಕೊಳತ್ತಮಜಲಿನಲ್ಲಿ ತಂದೆಗೆ ರಕ್ತವನ್ನು ಕೊಟ್ಟಿರುವ ಮತ್ತು ಮನೆ ಕಟ್ಟಲು ಸಹಾಯ ಮಾಡಿರುವ ಅಬ್ದುಲ್ ರಹಿಮಾನ್‌ನ್ನು ದೀಪಕ್ ಎಂಬಾತನು ತನ್ನ ಮನೆಗೆ ಕರೆದು ತಂಡದೊಂದಿಗೆ ಹತ್ಯೆ ಮಾಡಿರುವುದು ಹಿಂದೂ ನಾಯಕರಿಗೆ ಹಿಂದೂ ಸಮಾಜಕ್ಕೆ ಕಪ್ಪು ಚುಕ್ಕೆ ಅಲ್ಲವೇ ? ಇಂತಹ ವಿಶ್ವಾಸ ದ್ರೋಹ ಮಾಡುವುದನ್ನು , ಹತ್ಯೆಯನ್ನು ಯಾವುದೇ ಧರ್ಮ ಒಪ್ಪದು ಎಂದು ಹೇಳಿದ ಮಂಜುನಾಥ ಭಂಡಾರಿ ಅವರು ರಹೀಮಾನ್‌ನ್ನು ಹತ್ಯೆ ಮಾಡಿದವರಿಗೆ, ಹತ್ಯೆಗೆ ಪ್ರಚೋದನೆ ನೀಡಿದವರಿಗೆ , ದ್ವೇಷದ ಬೀಜ ಬಿತ್ತಿದವರಿಗೂ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

*ಕೋಮುವಾದದ ಮರ ಬೆಳೆದಿದೆ: ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ನೇತೃತ್ವದ ಸರಕಾರದ ಜನಪರ ಯೋಜನೆಯ ಮೂಲಕ ದ.ಕ. ಜಿಲ್ಲೆಯಲ್ಲಿ ಒಂದೊಮ್ಮೆ ಭದ್ರವಾಗಿ ನೆಲೆವೂರಿತ್ತು. ಲೋಕಸಭೆ, ವಿಧಾನ ಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಜಿಪಂನ 31ರಲ್ಲಿ 30    ಸ್ಥಾನವನ್ನು ಜಯಸಿತ್ತು. ಇದನ್ನು ನೋಡಿದ ಬಿಜೆಪಿ ಅಭಿವೃದ್ಧಿ ಮಂತ್ರದ ಮೂಲಕ ಕಾಂಗ್ರೆಸ್‌ನ್ನು ಮಣಿಸಲು ಸಾಧ್ಯವಿಲ್ಲ ಎಂದು ಮನಗಂಡು ಅಧಿಕಾರವನ್ನು ಪಡೆಯಲು 30 ವರ್ಷಗಳ ಹಿಂದೆ ಕೋಮುವಾದದ ವಿಷಬೀಜವನ್ನು ಬಿತ್ತಿತ್ತು. ಅದು ಇವತ್ತು ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.

ಕೋಮು ಗಲಭೆ, ಕೋಮು ಸಂಘರ್ಷ, ಕೋಮು ಹತ್ಯೆ ಇವೆಲ್ಲ ಭಿನ್ನವಾಗಿದೆ. ಕೋಮು ಹತ್ಯೆಯಾಗುವು ದನ್ನು ನಾವು ತಡೆಯಬೇಕಾಗಿದೆ. ಕರಾವಳಿ ಹೆಸರಿಗೆ ಯಾವುದೇ ಮಸಿ ಬೆಳೆಯುವ ಯತ್ನ ಬೇಡ ಎಂದರು.

ಕೋಮು ಪ್ರಚೋದಕ ಭಾಷಣ ಮಾಡುವವರಿಗೆ ಬೇಗನೆ ಜಾಮೀನು ಪಡೆಯುವ ವಿಚಾರದ ಬಗ್ಗೆ ಗಮನ ಸೆಳೆದಾಗ , ಮುಂದಿನ ಅಧಿವೇಶನದಲ್ಲಿ ಇದಕ್ಕೊಂದು ಪರಿಹಾರ ಕಂಡು ಹುಡುಕಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕಾಂಗ್ರೆಸ್ ಮುಖಂಡರಾದ ಪದ್ಮರಾಜ ಆರ್ ಪೂಜಾರಿ, ಲಾರೆನ್ಸ್ ಡಿ ಸೋಜ, ಎಚ್ ಮಹಮ್ಮದಾಲಿ ಪುತ್ತೂರು , ಜಿ.ಎ.ಬಾವಾ, ಪ್ರಕಾಶ್ ಸಾಲಿಯಾನ್, ವಿಶ್ವಾಸ್‌ಕುಮಾರ್‌ದಾಸ್, ನೀರಜ್ ಪಾಲ್, ಅನಿಲ್ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News