×
Ad

ಪೃಥ್ವಿಯ ಉಳಿವಿಗೆ ಪ್ಲಾಸ್ಟಿಕ್ ನಿರ್ಮೂಲನೆ ಅಗತ್ಯ: ಡಾ.ಆರ್.ಕೆ.ನಾಯರ್

Update: 2025-06-05 20:01 IST

ಮಂಗಳೂರು: ಅತಿಯಾದ ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯಾಗದಿದ್ದರೆ ಪೃಥ್ವಿಯ ಅವನತಿಯೂ ಸನಿಹವಾಗಲಿದೆ. ಪರಿಸರ ಸಂರಕ್ಷಣೆಯಾದಲ್ಲಿ ಮಾತ್ರ ಮನುಷ್ಯನ ಆರೋಗ್ಯ ಸಂರಕ್ಷಣೆ ಸಾಧ್ಯ ಎಂದು ಪರಿಸರವಾದಿ, ಗುಜರಾತ್ ನ ಸ್ಮೃತಿ ವನದ ರೂವಾರಿ ಡಾ.ಆರ್.ಕೆ.ನಾಯರ್ ಹೇಳಿದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ವತಿಯಿಂದ ಗುರುವಾರ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಯುವಜನತೆ, ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಗೆ ಆಂದೋಲನದ ರೀತಿಯಲ್ಲಿ ಪಣ ತೊಡಬೇಕು. ರೆಡ್ ಕ್ರಾಸ್ ಸಂಸ್ಥೆ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ ಎಂದರು.

ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಡಾ.ಸತೀಶ್ ರಾವ್, ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ಡಾ. ಸಚ್ಚಿದಾನಂದ ರೈ, ಎ.ವಿಠ್ಠಲ, ಡಾ.ಸುಮನಾ ಬೋಳಾರ್, ಸಲಹೆಗಾರರಾದ ಪ್ರಭಾಕರ ಶರ್ಮ, ಕೆ.ಎನ್. ಸುಧಾಕರ, ಸದಸ್ಯರಾದ ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಡ್ಮಿನ್ ಅಧಿಕಾರಿ ಸ್ಮಿತಾ ಶೆಣೈ ಉಪಸ್ಥಿತರಿದ್ದರು.

ರೆಡ್ ಕ್ರಾಸ್ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಸ್ವಾಗತಿಸಿ, ನಿರ್ದೇಶಕ ಗುರುದತ್ ನಾಯಕ್ ವಂದಿಸಿದರು. ಪಿ.ಬಿ. ಹರೀಶ್ ರೈ ನಿರೂಪಿಸಿದರು. ಮುಖ್ಯ ಅತಿಥಿಗಳು ಮತ್ತು ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ರೆಡ್ ಕ್ರಾಸ್ ಕಚೇರಿ ಕಟ್ಟಡದ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಇದೇ ಸಂದರ್ಭ ಡಾ.ಆರ್.ಕೆ.ನಾಯರ್ ಅವರನ್ನು ರೆಡ್ ಕ್ರಾಸ್ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News