ಸರಕಾರದ ರಾಜೀನಾಮೆಗೆ ಆಗ್ರಹಿಸಿ ದ.ಕ. ಜಿಲ್ಲಾ ಬಿಜೆಪಿ ಪ್ರತಿಭಟನೆ
ಮಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹಸಚಿವ ಡಾ. ಜಿ.ಪರಮೇಶ್ವರ ರಾಜೀನಾಮೆ ನೀಡಬೇಕು. ಪ್ರಕರಣದ ಬಗ್ಗೆ ನಿವೃತ್ತ ನ್ಯಾಯಾಧೀಶರ ಮೂಲಕ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ನಗರದಲ್ಲಿ ದ.ಕ ಜಿಲ್ಲಾ ಬಿಜೆಪಿ ಶುಕ್ರವಾರ ಪ್ರತಿಭಟನೆ ನಡೆಸಿತು. ಈ ಸಂದರ್ಭ ಸಿಎಂ, ಡಿಸಿಎಂ, ಗೃಹಸಚಿವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಕಾಂಗ್ರೆಸ್ ಸರಕಾರಕ್ಕೆ ಶಾಂತಿ ಸುವ್ಯವಸ್ಥೆ ಕಾಪಾ ಡುವ, ಆಡಳಿತ ನಡೆಸುವ ಸಾಮರ್ಥ್ಯವಿಲ್ಲ. ಆಡಳಿತ ವೈಫಲ್ಯಕ್ಕೆ ಕಾಲ್ತುಳಿತ ಘಟನೆಯೂ ಉದಾಹರಣೆ ಯಾಗಿದೆ. ಸಿಎಂ, ಡಿಸಿಎಂ, ಸಚಿವರ ಮನೆಯವರಿಗೆ ಮೋಜು ಮಸ್ತಿ, ಸೆಲ್ಫಿಗಾಗಿ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಆಪಾದಿಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಸರಕಾರ ತನ್ನ ತಪ್ಪು ಮುಚ್ಚಿ ಹಾಕಲು ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿದೆ ಎಂದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆಳ್ವ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ. ಮಂಜುಳಾ ರಾವ್, ಪಕ್ಷದ ಮುಖಂಡರಾದ ರಮೇಶ್ ಕಂಡೆಟ್ಟು, ರವಿಶಂಕರ ಮಿಜಾರು, ಸುಧೀರ್ ಶೆಟ್ಟಿ ಕಣ್ಣೂರು, ದಿವಾಕರ ಪಾಂಡೇಶ್ವರ, ಕಿಶೋರ್ ಕೊಟ್ಟಾರಿ, ನಿತಿನ್ ಕುಮಾರ್, ಸಂತೋಷ್ ಕುಮಾರ್ ರೈ ಬೋಳಿಯಾರ್ ಉಪಸ್ಥಿತರಿದ್ದರು.