×
Ad

ಕೊಳತ್ತಮಜಲು: ಅಬ್ದುಲ್ ರಹ್ಮಾನ್ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ

Update: 2025-06-08 19:59 IST

ಮಂಗಳೂರು: ಜಿಎಚ್‌ಎಂ ಫೌಂಡೇಶನ್ (ರಿ) ಮುಲ್ಲಾರಪಟ್ನ, ಮುಹಿಯುದ್ದೀನ್ ಜುಮಾ ಮಸ್ಜಿದ್ ಕೊಳತ್ತಮಜಲು ಹಾಗೂ ಎಸ್ಕೆಎಸ್ಸೆಸ್ಸೆಫ್ ಕೊಳತ್ತಮಜಲು ಶಾಖೆ ಇವುಗಳ ಜಂಟಿ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇವರ ಸಹಯೋಗದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಅಬ್ದುಲ್ ರಹ್ಮಾನ್ ಕೊಳತ್ತಮಜಲು ಇವರ ಸ್ಮರಣಾರ್ಥ ಸರ್ವ ಧರ್ಮೀಯರಿಂದ ಬೃಹತ್ ರಕ್ತದಾನ ಶಿಬಿರವು ಕೊಳತ್ತಮಜಲು ಮದರಸ ಸಭಾಂಗಣದಲ್ಲಿ ರವಿವಾರ ನಡೆಯಿತು.

ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಕೊಳತ್ತಮಜಲು ಶಾಖೆಯ ಅಧ್ಯಕ್ಷ ಮುಹಮ್ಮದ್ ಶಬೀರ್, ಕೊಳತ್ತಮಜಲು ಸೌಹಾರ್ದ ನೆಲೆಸಿದ್ದ ಊರು. ಇಲ್ಲಿ ರಹ್ಮಾನ್ ಹತ್ಯೆಯ ಬಳಿಕ ಸೌಹಾರ್ದ ಕೆಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಊರಿನ ಸೌಹಾರ್ದವನ್ನು ಪುನರ್ ಸ್ಥಾಪಿಸಿ ಗಟ್ಟಿಗೊಳಿಸುವ ಸಲುವಾಗಿ ಇಂದು ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಇಲ್ಲಿನ ಹಿಂದೂ ಬಾಂಧವರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತ‌ ನೀಡಿದ್ದಾರೆ. ಹಾಗಾಗಿ ನಮ್ಮ ಉದ್ದೇಶ ಫಲಿಸಿದೆ ಎಂಬುವುದು ನಮ್ಮೆಲ್ಲರ‌ ಅಭಿಪ್ರಾಯ ಎಂದು ನುಡಿದರು.

ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಆದಿ ಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸಂದೀಪ್‌ ಸದಾಶಿವ ಬೆಳ್ಳೂರು ಅವರು, ಬಡಗಬೆಳ್ಳೂರು ಪರಿಸದಲ್ಲಿ ನಾವು ಹಿಂದೂ- ಮುಸ್ಲಿಂ ಎಂಬ ಭಾವನೆ ಇಲ್ಲದೆ ಒಂದೇ ತಂದೆಯ ಮಕ್ಕಳಂತೆ ಬಾಳುತ್ತಿದ್ದವರು. ರಹ್ಮಾನ್ ಅವರು ಜಾತಿ ಧರ್ಮಗಳನ್ನು ನೋಡದೆ ಎಲ್ಲರಿಗೂ ಉಪಕಾರ ಮಾಡುತ್ತಿದ್ದ ವ್ಯಕ್ತಿ. ಇಂತಹಾ ಘಟನೆ ಆಗಬಾರದಿತ್ತು. ಆದರೆ ಆಗಿ ಹೋಗಿದೆ. ಹಾಗೆಂದು ನಮ್ಮಲ್ಲಿನ ಸೌಹಾರ್ದ ಕಾರ್ಯಕ್ರಮಗಳು ಇಲ್ಲಿಗೇ ನಿಲ್ಲಬಾರದು ಎಂದು ಅವರು ಕೈಮುಗಿದು ಮನವಿ ಮಾಡಿದರು.

ನಮ್ಮ ಊರಿನಲ್ಲಿ ಸೌಹಾರ್ದದಿಂದಲೇ ಇದ್ದೇವೆ. ಮುಂದೆಯೂ ಅದೇ ಸೌಹಾರ್ದ ಮುಂದುವರಿಯಬೇಕು ಎಂಬುವುದು ನಮ್ಮ ಆಶಯ. ದೇವರು ಕೊಟ್ಟ ಜನ್ಮ ಹಿಂದೂ- ಮುಸ್ಲಿಂ ಎಂಬ ಬೇಧ ಭಾವ ನಾವು ಇರುವ ಮಣ್ಣಲ್ಲೂ ಇಲ್ಲ. ಊರಿನಲ್ಲಿ ಯಾವುದೇ ಕಾರ್ಯಕ್ರಮಗಳಿದ್ದರೂ ಅಣ್ಣ ತಮ್ಮಂದಿರಂತೆ ಇದ್ದೆವು, ಮುಂದೆಯೂ ಹಾಗೆಯೇ ಇರಬೇಕು ಎಂಬುದು ನಮ್ಮ ಆಸೆ.

ರಹ್ಮಾನ್ ಯಾವುದೇ ಧರ್ಮದ ಕಾ‌ರ್ಯಕ್ರಮವಾದರೂ‌ ಮುಂದೆ ನಿಂತು ಅದರ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಎಲ್ಲರಿಗೂ ಉಪಕಾರಿ. ಇಂತಹಾ ಮರಣವನ್ನು ದೇವರು ಅವನಿಗೆ‌ ಕೊಡಬಾರದಿತ್ತು ಎಂದು ಭಾವುಕರಾದ ಅವರು, ನಮ್ಮ ಬಡಗಬೆಳ್ಳೂರು ಗ್ರಾಮದ ಸೌಹಾರ್ದ ನಮ್ಮ ಗ್ರಾಮದಿಂದ ದೇಶದ ಉದ್ದಗಲಕ್ಕೂ ಹರಡಿ ಮಾದರಿಯಾಗಬೇಕು ಎಂದು ಸ್ಥಳೀಯರಾದ ಜನಾರ್ಧನ ಅವರು ಎಂದು ನುಡಿದರು.

ಶಿಬಿರಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೊಳತ್ತಮಜಲು ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ‌ ಖತೀಬ್ ಇಬ್ರಾಹೀಂ ದಾರಿಮಿ, ಮುಹಿಯುದ್ದೀನ್ ಜುಮಾ ಮಸೀದಿಯ ಗೌರವಾಧ್ಯಕ್ಷ ಯೂಸುಫ್ ಬೆಳುವಾಯಿ, ಮಸೀದಿಯ ಸದರ್ ಮುಅಲ್ಲಿಂ ಅಬ್ದುಲ್ ರಝಾಕ್ ದಾರಿಮಿ, ಮೃತ ಅಬ್ದುಲ್‌ ರಹ್ಮಾನ್‌ ಅವರ ಸಹೋದರ ಹನೀಫ್, ನಾಸೀರ್ ಮುಲ್ಲರಪಟ್ನ ಮೊದಲಾದವರು ಉಪಸ್ಥಿತರಿದ್ದರು.

"ಅಬ್ದುಲ್ ರಹಿಮಾನ್ ಅವರು ಇದ್ದಾಗ ಇಂತಹಾ ಅನೇಕ ಕಾರ್ಯಕ್ರಮಗಳನ್ನು ಮಾಡಿರುವುದು ನಾವು ಕಂಡಿದ್ದೇವೆ. ಇಂತಹಾ ಕಾರ್ಯಕ್ರಮ ಮುಂದಿನ ದಿನಗಳಲ್ಲಿಯೂ ನಮ್ಮ ಕೊಳತ್ತಮಜಲು ಪ್ರದೇಶದಲ್ಲಿ ನಡೆಯಬೇಕು. ಆ ಮೂಲಕ ರಹ್ಮಾನ್ ಅವರು ನಮ್ಮೊಂದಿಗೆ ಇರುವಂತೆ ಆಗಬೇಕು".

- ಡಾ.‌ಕೃಷ್ಣ ಮೂರ್ತಿ ಬಡಗಬೆಳ್ಳೂರು

"ಕಲ್ಲುರ್ಟಿ ಮಂತ್ರದೇವತೆಯ ದೈವಸ್ಥಾನದ ಕಾಮಗಾರಿಯ ವೇಳೆ‌ ಅಬ್ದುಲ್ ರಹ್ಮಾನ್ ಮರಳು ಹಾಕಿದ್ದರು.‌ ಅದರ ಹಣಕ್ಕಾಗಿ ಒಂದು ಬಾರಿಯೂ ಕೇಳಿದವರಲ್ಲ. ಇಲ್ಲಿನ ಸೌಹಾರ್ದ ಮುಂದುವರಿ‌ ಯಬೇಕು. ಕ್ರೀಡೆ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಹಿಂದಿನಂತೆಯೇ ಮುಂದೆಯೂ ನಡೆಯುತ್ತಿರಬೇಕು".

- ಸಂದೀಪ್‌ ಬೆಳ್ಳೂರು















Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News