×
Ad

ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಎನ್‌ಐಎ ತನಿಖೆಗೆ: ಸಂಸದ ಬ್ರಿಜೇಶ್ ಚೌಟ ಸ್ವಾಗತ

Update: 2025-06-08 20:35 IST

ಬ್ರಿಜೇಶ್ ಚೌಟ

ಮಂಗಳೂರು, ಜೂ.8:‌ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ವಹಿಸಿರುವುದಕ್ಕೆ ದ.ಕ. ಸಂಸದ ಬ್ರಿಜೇಶ್ ಚೌಟ ಸ್ವಾಗತಿಸಿದ್ದಾರೆ.

ಸುಹಾಸ್ ಶೆಟ್ಟಿಯನ್ನು ಬಜ್ಪೆಯಲ್ಲಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದ ಬೆನ್ನಲ್ಲೇ ಅಂದರೆ ಮೇ 2ರಂದು ಚೌಟ ಅವರು ಈ ಪ್ರಕರಣ ಅತ್ಯಂತ ಗಂಭೀರವಾಗಿದ್ದು ಅದನ್ನು ಎನ್‌ಐಎ ಸಂಸ್ಥೆಗೆ ವಹಿಸುವಂತೆ ಕೋರಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ಸುಹಾಸ್ ಶೆಟ್ಟಿ ಹತ್ಯೆಯ ಗಂಭೀರತೆ ಹಾಗೂ ಅದರ ಹಿಂದೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕೈವಾಡವಿರುವ ಅನುಮಾನ ಇದೆ ಎಂದು ಹೇಳಿದ್ದರು.

ಸುಹಾಸ್ ಹತ್ಯೆ ಪ್ರಕರಣವನ್ನು ನ್ನು ಎನ್‌ಐಎಗೆ ವಹಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಚೌಟ ಅವರು, ‘ಸುಹಾಸ್ ಶೆಟ್ಟಿ ಹತ್ಯೆಯಾದ ಬೆನ್ನಲ್ಲೇ ಈ ಪ್ರಕರಣವನ್ನು ಎನ್‌ಐಎ ತನಿಖಾ ಸಂಸ್ಥೆಗೇ ವಹಿಸಬೇಕೆಂದು ನಾನು ಒತ್ತಾಯಿಸಿದ್ದೆ. ಆ ಕೂಡಲೇ ಗೃಹ ಸಚಿವರಾದ ಅಮಿತ್ ಶಾ ಅವರಿಗೂ ಪತ್ರ ಬರೆದು, ಸುಹಾಸ್ ಹತ್ಯೆಯಲ್ಲಿ ಕೇವಲ ಅಪರಾಧಿಗಳು ಮಾತ್ರವಲ್ಲದೆ ಅವರಿಗೆ ಬೆಂಬಲ ನೀಡಿದ ಮತ್ತು ಹಣಕಾಸು ನೆರವು ನೀಡಿದ ಎಲ್ಲರನ್ನು ತ್ವರಿತವಾಗಿ ನ್ಯಾಯದ ಮುಂದೆ ತರಬೇಕಿದೆ. ಅಲ್ಲದೆ, ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರ ಕೈವಾಡದ ಸಾಧ್ಯತೆ ಇರುವುದರಿಂದ ಈ ಕುರಿತು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿರುವುದು ಅತ್ಯಗತ್ಯ ಎಂದು ಹೇಳಿದ್ದರು.

ಗೃಹಸಚಿವಾಲಯವು ಸಕಾಲದಲ್ಲಿ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸಿರುವುದು ದಕ್ಷಿಣ ಕನ್ನಡದಲ್ಲಿ ದೇಶವಿರೋಧಿ ಶಕ್ತಿಗಳನ್ನು ಬೇರು ಸಮೇತ ಕಿತ್ತೊಗೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪ್ರಕರಣವನ್ನು ಕೂಡ ಎನ್‌ಐಎಗೆ ವಹಿಸಿದ ಕಾರಣ ಇಲ್ಲಿವರೆಗೆ ಪಿಎಫ್‌ಐ ಸಂಘಟನೆಯ ಹಲವರನ್ನು ಜೈಲಿಗೆ ಅಟ್ಟುವುದಕ್ಕೆ ಸಾಧ್ಯವಾಗಿದೆ.

‘ಸುಹಾಸ್ ಶೆಟ್ಟಿ ಹತ್ಯೆ ಕೇಸ್‌ನ್ನು ಎನ್‌ಐಎಗೆ ವಹಿಸುವಂತೆ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದ ನಿಯೋಗ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿತ್ತು. ಇದೀಗ ಗೃಹ ಸಚಿವಾಲಯವೇ ಈ ಕೊಲೆಯ ಗಂಭೀರತೆಯನ್ನು ಮನಗಂಡು ಎನ್‌ಐಗೆ ಒಪ್ಪಿಸಿರುವ ಕಾರಣ ಖಂಡಿತವಾಗಿವೂ ಮತೀಯವಾದಿಗಳು ಹಾಗೂ ರಾಷ್ಟ್ರವಿರೋಧಿ ಶಕ್ತಿಗಳ ಪಿತೂರಿಗೆ ಬಲಿಯಾದ ಸುಹಾಸ್ ಶೆಟ್ಟಿ ಸಾವಿಗೆ ಹಾಗೂ ಮಗನನ್ನು ಕಳೆದುಕೊಂಡಿರುವ ನೊಂದ ಕುಟುಂಬಕ್ಕೆ ನ್ಯಾಯ ದೊರೆಯುವ ಪೂರ್ಣ ವಿಶ್ವಾಸವಿದೆ’ ಎಂದು ಚೌಟ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News