ದೇರಳಕಟ್ಟೆ: ಕಾನಕೆರೆ ದುರಂತ ನಡೆದ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ
ಕೊಣಾಜೆ: ಮನೆ ಮೇಲೆ ಗುಡ್ಡದ ಮಣ್ಣು ಕುಸಿದು ಬಾಲಕಿಯೊಬ್ಬಳು ಮೃತಪಟ್ಟ ದೇರಳಕಟ್ಟೆ ಬೆಳ್ಮ ಗ್ರಾಮದ ಕಾನೆಕೆರೆ ಎಂಬಲ್ಲಿಗೆ ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾನಕೆರೆಯ ಈ ಪ್ರದೇಶದಲ್ಲಿ ತುಂಬಾ ಗಂಭೀರ ಪರಿಸ್ಥಿತಿ ಇದೆ. ಮಳೆಗಾಲ ಮುಗಿಯುವ ತನಕ ತಾತ್ಕಾಲಿಕವಾಗಿ ಇನ್ನಷ್ಟು ಗುಡ್ಡ ಕುಸಿಯಂತೆ ಸಂರಕ್ಷಣಾ ಕ್ರಮ ಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇನೆ. ಗುಡ್ಡ ಕುಸಿದ ಜಾಗದಲ್ಲೆ ಮನೆ ನಿರ್ಮಿಸಲು ಕಾನೂನಿನ ಅವಕಾಶವಿಲ್ಲ. ಪರ್ಯಾಯವಾಗಿ ಪ್ರಕೃತಿ ವಿಕೋಪದಡಿ ಅವಕಾಶಗಳ ಬಗೆಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅಲ್ಲದೆ ಮಾನವೀಯತೆ ದೃಷ್ಟಿಯಿಂದ ಇನ್ನಷ್ಟು ಅನುಕೂಲತೆ ಮತ್ತು ಅನುದಾನ ಒದಗಿಸಿ ಕೊಡುವಂತೆ ಮತ್ತೊಮ್ಮೆ ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ ಎಂದರು.
ಸಹಾಯಕ ಆಯುಕ್ತರಾದ ಹರ್ಷವರ್ಧನ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್, ತಹಶಿಲ್ದಾರರಾದ ಪುಟ್ಟರಾಜು, ಪಿಡಿಒ ರಮೇಶ್ ನಾಯ್ಕ್, ಗ್ರಾಮ ಲೆಕ್ಕಿಗರಾದ ರೇಷ್ಮಾ, ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ, ಗೇರು ಅಭಿವೃದ್ಧಿ ನಿಗಮದ ಮಮತಾ ಡಿಎಸ್ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಎ.ಕೆ.ರಹಿಮಾನ್ ಕೋಡಿಜಾಲ್, ಹಿರಿಯ ಕಾಂಗ್ರೆಸ್ ಮುಖಂಡ ಟಿ.ಎಸ್ ಅಬ್ದುಲ್ಲಾ, ಯೂಸೂಫ್ ಬಾವ, ಪಂಚಾಯತ್ ಮಾಜಿ ಅಧ್ಯಕ್ಷರಾದ ಸತ್ತಾರ್ ಸಿ.ಎಂ., ಸಿ.ಎಂ.ರವೂಫ್, ಎನ್ ಎಸ್ ಕರೀಂ, ಗ್ಯಾರಂಟಿ ಸಮಿತಿ ಅಧ್ಯಕ್ಷ ರಫೀಕ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸುರೇಖಾ ಚಂದ್ರಹಾಸ್, ರವಿರಾಜ್ ಶೆಟ್ಟಿ, ಸುರೇಶ್ ಭಟ್ನಗರ, ಸುದರ್ಶನ ಶೆಟ್ಟಿ ಅಂಬ್ಲಮೊಗರು, ಮಹಮ್ಮದ್ ಮೋನು, ಕಬೀರ್ ದೇರಳಕಟ್ಟೆ, ಪಂಚಾಯತ್ ಸದಸ್ಯ ಅಬ್ದುಲ್ ರಝಾಕ್, ಮಹಮ್ಮದ್ ಹನೀಫ್, ಇಬ್ರಾಹಿಂ ಬದ್ಯಾರ್, ಇಕ್ಬಾಲ್ ಎಚ್ ಆರ್, ಮೊದಲಾದವರು ಉಪಸ್ಥಿತರಿದ್ದರು.
ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಯು.ಟಿ.ಖಾದರ್
ಮಂಜನಾಡಿ ಗ್ರಾಮದ ಕೊಪ್ಪಳ ಪ್ರದೇಶದಲ್ಲಿ ಗುಡ್ಡದೊಂದಿಗೆ ಮನೆ ಕುಸಿದು ನಡೆದ ದುರಂತದಲ್ಲಿ ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿರುವ ಅಶ್ವಿನಿ ಹಾಗೂ ಕಾಂತಪ್ಪ ಪೂಜಾರಿ ಅವರ ಆರೋಗ್ಯವನ್ನು ವಿಚಾರಿಸಿದರು.