ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ಇನ್ನೂ ಎರಡು ದಿನ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಗುರುವಾರ ರೆಡ್ ಅಲರ್ಟ್ ಘೋಷಿಸಿದ ಕಾರಣ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ನಿರೀಕ್ಷಿತ ರೀತಿಯಲ್ಲಿ ಭಾರೀ ಮಳೆಯಾಗಿಲ್ಲ.
ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಗುರುವಾರ ಬೆಳಗ್ಗಿನವರೆಗೆ ಒಂದು ಮನೆಗೆ ಸಂಪೂರ್ಣ ಮತ್ತು ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 70ರಷ್ಟು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 41.4 ಮಿ.ಮೀ ಮಳೆಯಾಗಿದೆ. ಮೂಲ್ಕಿಯಲ್ಲಿ 75 ಮಿ.ಮೀ, ಉಳ್ಳಾಲದಲ್ಲಿ 71.8 ಮಿ.ಮೀ, ಬಂಟ್ವಾಳದಲ್ಲಿ 57.3 ಮಿ.ಮೀ, ಮಂಗಳೂರಿನಲ್ಲಿ 54.3 ಮಿ.ಮೀ, ಬೆಳ್ತಂಗಡಿಯಲ್ಲಿ 46.1 ಮಿ.ಮೀ, ಪುತ್ತೂರಿನಲ್ಲಿ 25.9 ಮಿ.ಮೀ, ಮೂಡುಬಿದಿರೆಯಲ್ಲಿ 43.4 ಮಿ.ಮೀ, ಕಡಬದಲ್ಲಿ 18.7 ಮಿ.ಮೀ ಮಳೆಯಾಗಿದೆ.
*ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಮೀನುಗಾರರು ಎಚ್ಚರಿಕೆ ಯಿಂದ ಇರುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಗುರುವಾರ ಗರಿಷ್ಠ 36.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.