ಸೋಮೇಶ್ವರ ಪುರಸಭೆ ಸಾಮಾನ್ಯ ಸಭೆ: ಮಳೆಹಾನಿ, ಪರಿಹಾರದ್ದೇ ಚರ್ಚೆ
ಉಳ್ಳಾಲ: ವ್ಯಾಪಕ ಮಳೆಯಿಂದ ಆಗಿರುವ ಹಾನಿ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸೋಮೇಶ್ವರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾರೀ ಚರ್ಚೆ ನಡೆಯಿತು.
ಪುರಸಭೆಯ ಅಧ್ಯಕ್ಷ ಕಮಲ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರ್ , ವಿಪರೀತ ಮಳೆಯಿಂದ ಪಿಲಾರ್ ಮಹಾಲಕ್ಷ್ಮೀ ಮಂದಿರದ ಬಳಿಯಿರುವ ಕಿರು ಸೇತುವೆ ತುಂಬಿ ಹರಿಯುತ್ತಿದೆ. ಇದರಿಂದ ಕೃಷಿ ಹಾಗೂ ಮನೆಗೆ ಹಾನಿಯಾಗಿದೆ. ಈ ಬಗ್ಗೆ ಮುಂಜಾಗ್ರತೆ ಕ್ರಮ ಪುರಸಭೆ ವತಿಯಿಂದ ಆಗಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ರವಿಶಂಕರ್ ಪ್ರಾಕೃತಿಕ ವಿಕೋಪದಿಂದ ಸಂಭವಿಸಿದ ಹಾನಿಗೆ ಪರಿಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಮೇಶ್ವರ ವ್ಯಾಪ್ತಿಯಲ್ಲಿ ಸಂಭಾವ್ಯ ಹಾನಿ ತಡೆಗಟ್ಟಲು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗುವುದು. ಮುಚ್ಚಿ ಹೋಗಿರುವ ಕಾಲುವೆಯ ಹೂಳೆತ್ತಲಾಗವುದು ಎಂದರು.
ಕೌನ್ಸಿಲರ್ ಸಲಾಮ್ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿಯಿಂದ ಆಗಿರುವ ಹಾನಿ ಬಗೆ ನಾವು ವರದಿ ನೀಡಿದ್ದೇವೆ. ಉಚ್ಚಿಲದಲ್ಲಿ ರೈಲ್ವೆ ಇಲಾಖೆಯವರು ಸುರಿದ ಮಣ್ಣು ಭಾರೀ ಮಳೆಗೆ ರಸ್ತೆಗೆ, ಮನೆಗಳಿಗೆ ನುಗ್ಗಿದ್ದರಿಂದ ಹಾನಿಯುಂಟಾಗಿದೆ. ಈ ರೀತಿ ಹಾನಿಗೊಳಗಾದ ಮನೆಗಳಿಗೆ 15 ಸಾವಿರ ರೂ. ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸೋಮೇಶ್ವರ ಗ್ರಾಮಕರಣಿಕ ಲಾವಣ್ಯಾ ಮಾತನಾಡಿ, 174 ಪ್ರಕೃತಿ ವಿಕೋಪ ಹಾನಿ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 77 ಮನೆಗಳಿಗೆ ತಲಾ ಐದು ಸಾವಿರ ರೂ.ನಂತೆ ಪರಿಹಾರ ನೀಡಲಾಗಿದೆ. ಆರು ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಹಾನಿಯಾದ ಎಲ್ಲಾ ಮನೆಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆ ಆಗುತ್ತದೆ. ಈ ಬಗ್ಗೆ ವರದಿ ತಹಶೀಲ್ದಾರ್ ಅವರಿಗೆ ನೀಡಲಾಗಿದೆ ಎಂದರು.
ಮುಖ್ಯಾಧಿಕಾರಿ ಮತ್ತಡಿ ಮಾತನಾಡಿ, ವಿಪರೀತ ಮಳೆಗೆ ಕಾಟುಂಗರ ಗುಡ್ಡೆ, ಅಂಬಿಕಾ ನಗರದಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಪಿಲಾರ್ ನಲ್ಲಿ ಸೇತುವೆಗೆ ಹಾನಿಯಾಗಿದೆ. ಪುರಸಭಾ ಅನುದಾನದಲ್ಲಿ ಇದರ ದುರಸ್ತಿ, ಪರಿಹಾರ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಇದರ ಪ್ರಸ್ತಾವವನ್ನು ಸರಕಾರಕ್ಕೆ ಕಳುಹಿಸಬೇಕಾಗಿದೆ ಎಂದರು.
ಮಳೆಗಾಲದ ತುರ್ತು ಸಂದರ್ಭದಲ್ಲಿ ಬಳಸಲು ಒಂದು ಬೋಟು ಹಾಗೂ ವಾಹನವನ್ನು ಬಾಡಿಗೆಗೆ ಪಡೆಯಬೇಕಿದೆ. ತುರ್ತು ಸಂದರ್ಭದಲ್ಲಿ ಜನರನ್ನು ರಕ್ಷಣೆ ಮಾಡಲು ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.
ಪುರಸಭೆಯ ವ್ಯಾಪ್ತಿಯಲ್ಲಿ ವಾರದ ಸಂತೆಗೆ ಅನುಮೋದನೆ ನೀಡಲಾಗುವುದು ಎಂದು ಮತ್ತಡಿ ತಿಳಿಸಿದರು.
ಹೊಳೆಯ ಬದಿಯಲ್ಲಿ ಕಸ ಹಾಕುವವರನ್ನು ಪತ್ತೆ ಮಾಡಲು ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಉಪಾಧ್ಯಕ್ಷ ರವಿಶಂಕರ್ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಲಲಿತಾ ಮಾತನಾಡಿ, ಅಂಬಿಕಾ ರೋಡ್ ಬಳಿ ಒಂದು ಡೆಂಗಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸೊಳ್ಳೆ ಉತ್ಪತ್ತಿ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಭೆಗೆ ತಿಳಿಸಿದರು.
ಸ್ಥಾಯಿ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಉಪಸ್ಥಿತರಿದ್ದರು.