×
Ad

ಸುರತ್ಕಲ್: ಅಡ್ಡಾದಿಡ್ಡಿ ನಿಲ್ಲುವ ಸಿಟಿ ಬಸ್ ಗಳಿಂದ ಸಂಚಾರ ದುಸ್ತರ

Update: 2025-06-13 22:37 IST

ಸುರತ್ಕಲ್: ಸುರತ್ಕಲ್ ಪೇಟೆಯಲ್ಲಿ ಕೃಷ್ಣಾಪುರ, ಕಾನ- ಮಂಗಳೂರು ಸಂಚರಿಸುವ ಸಿಟಿ ಬಸ್ ಗಳಿಗೆ ಸರಿಯಾದ ಬಸ್ ನಿಲ್ದಾಣವಿಲ್ಲದೆ ಅಡ್ಡಾದಿಟ್ಟಿಯಾಗಿ ರಸ್ತೆ ಮಧ್ಯದಲ್ಲಿ ನಿಲ್ಲಿಸುವುದರಿಂದ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಕಿರಿಕಿರಿಯ ಜೊತೆಗೆ ಅಪಘಾತಕ್ಕೂ ಆಹ್ವಾನ ನೀಡುತ್ತಿದೆ.

ಕೃಷ್ಣಾಪುರ, ಕಾನದಿಂದ ಮಂಗಳೂರು ಕಡೆ ಸಂಚರಿಸುವ ಗಳಿಗೆ ಸುರತ್ಕಲ್ ಪೇಟೆಯಲ್ಲಿ ಸರಿಯಾದ ಬಸ್ ನಿಲ್ದಾಣದ ವ್ಯವಸ್ಥೆ ಇಲ್ಲ ಹೀಗಾಗಿ ಬಸ್ ಗಳು ಸುರತ್ಕಲ್ ಪೇಟೆಯ ತಿರುವಿನಲ್ಲಿ ನಿಲ್ಲುತ್ತಿದೆ.

ಸುರತ್ಕಲ್ ಪೇಟೆಯ ವಿಶ್ವ ಬ್ರಾಹ್ಮಣ ಸಮಾಜ ಸಭಾಭವನದ ಎದುರಿನ ಸರ್ವಿಸ್ ರಸ್ತೆ ದ್ವಿಮುಖ ಸರ್ವಿಸ್ ರಸ್ತೆಯಾಗಿದ್ದು ವಾಹನಗಳು ಎರಡು ಕಡೆಯಿಂದ ಸಂಚರಿಸುತ್ತಿರುತ್ತವೆ. ಹೀಗಾಗಿ ಸುರತ್ಕಲ್ ಪೇಟೆಯ ಮಂಗಳೂರು ಕಡೆಯ ತಿರುವಿನಲ್ಲಿ ಸಿಟಿ ಬಸ್ ಗಳು ಅಡ್ಡಾದಿಡ್ಡಿಯಾಗಿ ನಿಲ್ಲುವುದರಿಂದ ಎದುರುಬದಿರಿನ ರಸ್ತೆಗಳು ವಾಹನಸವಾರರಿಗೆ ಕಾಣದೆ ಹಲವು ವಾಹನಗಳು ಅಪಘಾತಕೀಡಾಗಿವೆ. ಅಲ್ಲದೆ ಈ ರಸ್ತೆಯಾಗಿ ಸಂಚರಿಸಲು ಸಾರ್ವಜನಿಕರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಿಟಿ ಬಸ್ ಗಳು ಕೃಷ್ಣಪುರ, ಕಾನ ಕಡೆಯಿಂದ ಮಂಗಳೂರು ಸಂಚರಿಸುವಾಗ ಸುರತ್ಕಲ್ ಪೇಟೆಯ ತಿರುವಿನಲ್ಲಿ ನಿಲ್ಲುತ್ತಿದ್ದು, ಇದು ಅಪಘಾತಗಳನ್ನು ಆಹ್ವಾನಿಸುತ್ತಿದೆ. ಜೊತೆಗೆ ಟ್ರಾಫಿಕ್ ಜಾಮ್ ಕೂಡಾ ಉಂಟಾಗುತ್ತಿದೆ.

ಸುರತ್ಕಲ್ - ಮಂಗಳೂರು ಸರ್ವಿಸ್ ರಸ್ತೆಯ ಪಕ್ಕದಲ್ಲಿರುವ ನಿರ್ಮಾಣ ಹಂತದ ಮೂಡ ಮಾರುಕಟ್ಟೆಯ ಬಳಿ ಸುಮಾರು 500 ಮೀಟರ್ ಗಳಷ್ಟು ವಿಶಾಲಸ್ಥಾಳಾವಕಾಶವಿದ್ದು, ಅದನ್ನು ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕ್ ಮಾಡಲು ಬಳಸುತ್ತಿದ್ದಾರೆ.

ಈ ಅನಧಿಕೃತ ವಾಹನ ಪಾರ್ಕಿಂಗ್ ಅನ್ನು ತೆರವುಗೊಳಿಸಿ ಅಲ್ಲಿ ಸಿಟಿ ಬಸ್ ಗಳಿಗೆ ಅವಕಾಶ ಕಲ್ಪಿಸಿದರೆ ಉತ್ತಮ. ಅಥವಾ ತಿರುವಿನಲ್ಲಿರುವ ಆಟೊ ರಿಕ್ಷಾ ನಿಲ್ದಾಣವನ್ನು ತೆರವು ಮಾಡಿ ಬಳಿಯಿರುವ 500ಮೀ. ಉದ್ದದ ಅನಧಿಕೃತ ವಾಹನ‌ ಪಾರ್ಕಿಂಗ್ ತೆರವು ಮಾಡಿ ಅಲ್ಲಿ ಬಸ್ ನಿಲ್ದಾಣ ಮಾಡಿದೂರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು‌ ಸಾರ್ವಜನಿಕರು, ವಾಹನ ಸವಾರರು ಹೇಳುತ್ತಿದ್ದಾರೆ.

ಅಲ್ಲದೆ, ಮಂಗಳೂರಿನಿಂದ ಕೃಷ್ಣಾಪುರ, ಕಾನಕ್ಕೆ ಹೋಗುವ ಸಿಟಿ ಬಸ್‌ಗಳು ಕೆನರಾ ಬ್ಯಾಂಕ್ ಮುಂಭಾಗ ದಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಹೆದ್ದಾರಿಯಿಂದ ಕೃಷ್ಣಾಪುರ - ಕಾನ ತಿರುವು ಪಡೆದುಕೊಳ್ಳುವ ವಾಹನ ಗಳು ಹೆದ್ದಾರಿಯಲ್ಲೇ ಬ್ಲಾಕ್ ಆಗುತ್ತಿದ್ದು, ಎನ್ ಎಚ್ 66ಸಂಪೂರ್ಣ ಬ್ಲಾಕ್ ಆಗುತ್ತವೆ‌. ಇಲ್ಲಿ ಟ್ರಾಫಿಕ್ ಪೊಲೀಸ್‌ ಸಿಬ್ಬಂದಿ ಇದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಸದ್ಯ ಕೆನರಾ ಬ್ಯಾಂಕ್ ಮುಂಭಾಗದ ಅನಧೀಕೃತ ಬಸ್ ನಿಲ್ದಾಣವನ್ನು ತೆರವು ಮಾಡಿ ಬ್ಲಾಕ್ ಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

"ಬಸ್ ಗಳಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಸಿಕ್ಕಿದ ತಕ್ಷಣ ಕ್ರಮ ವಹಿಸಲಾಗಿದೆ. ಬಸ್ ನಿಲ್ದಾಣಕ್ಕೆ ಸಂಬಂಧಿಸಿದ ಸೈನ್ ಬೋರ್ಡ್ ಗಳನ್ನು ಮಾಡಲಾಗುತ್ತಿದೆ‌.‌ ಶನಿವಾರ, ರವಿವಾರದ ಒಳಗಾಗಿ ಬಸ್ ನಿಲ್ದಾಣವನ್ನು ವಿಶ್ವ ಬ್ರಾಹ್ಮಣ ಸಮಾಜ ಸಭಾಭವನದ ಬಳಿಗೆ ಸ್ಥಳಾಂತರಿಸಲಾಗುವುದು".

- ಶಿವ ಕುಮಾರ್, ಪೊಲೀಸ್ ನಿರೀಕ್ಷಕರು, ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News