ಬೈಕಂಪಾಡಿಯಲ್ಲಿ ರಸ್ತೆಗೆ ಉರುಳಿದ ಮರ; ತಪ್ಪಿದ ಅನಾಹುತ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಲ್ಲಿ ಇಂದು ಸಂಜೆ ಮಳೆಯೊಂದಿಗೆ ಬೀಸಿದ ಗಾಳಿಗೆ ರಸ್ತೆಯ ಬದಿಯ ಮರವೊಂದು ಧರಶಾಹಿಯಾಗಿದ್ದು, ಸುಮಾರು 20 ನಿಮಿಷಗಳ ಕಾಲ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳೀಯರು ರಸ್ತೆಯ ಮೇಲೆ ಬಿದ್ದಿದ್ದ ಮರದ ಗೆಲ್ಲುಗಳನ್ನು ತುಂಡರಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಮರ ಉರುಳುವಾಗ ರಸ್ತೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮನೆಗಳಿಗೆ ಹಾನಿ: ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ಬಜಾಲ್ ಪಕ್ಕಲಡ್ಕ ಎಂಬಲ್ಲಿ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ನಗರದ ಬಟ್ಟಗುಡ್ಡೆಯಿಂದ ಸರ್ಕ್ಯೂಟ್ ಹೌಸ್ ಕಡೆ ಹೋಗುವ ರಸ್ತೆ ಪಕ್ಕದ ಧರೆ ಕುಸಿದಿದೆ. ಇಲ್ಲಿ ನಾಲ್ಕೈದು ವರ್ಷಗಳ ಹಿಂದೆ ಧರೆ ಕುಸಿದಿದ್ದಾಗ ಜಲ್ಲಿ ತುಂಬಿದ ಚೀಲಗಳನ್ನಿರಿಸಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿತ್ತು. ಅದರ ಬಳಿಕ ಶಾಶ್ವತ ಕಾಮಗಾರಿ ನಡೆಸದೆ ಇದ್ದುದರಿಂದ ಮತ್ತೆ ಕುಸಿದಿದೆ ಎಂದು ತಿಳಿದು ಬಂದಿದೆ.
ಮತ್ತೆ ಮನೆಗಳಿಗೆ ನುಗ್ಗಿದ ನೀರು: ನಿರಂತರ ಮಳೆಯಿಂದ ಬೆಳಗ್ಗೆ ನಗರದ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿತ್ತು. ಮಾಲೆಮಾರ್‌ನಲ್ಲಿ ಅನೇಕ ಮನೆಗಳು ಜಲಾವೃತಗೊಂಡಿದ್ದರೆ, ಭಗವತಿನಗರ, ಅತ್ತಾವರ, ಪಾಂಡೇಶ್ವರದಲ್ಲೂ ಮನೆಗಳಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ. ಮಳೆ ಕಡಿಮೆಯಾದ ಬಳಿಕ ನೀರು ಇಳಿದಿದೆ. ರವಿವಾರ ಮಧ್ಯಾಹ್ನದಿಂದ ಸಂಜೆವರೆಗೆ ಬಿಡುವು ನೀಡಿದ ಮಳೆ ಬಳಿಕ ಮತ್ತೆ ಆರಂಭಗೊಂಡಿತ್ತು.
ಮಂಗಳೂರಿನಲ್ಲಿ ಶನಿವಾರದ ಕೃತಕ ಪ್ರವಾಹ ಬಳಿಕ ಹತೋಟಿಗೆ ಬಂದಿದ್ದರೂ, ರವಿವಾರ ಬೆಳಗ್ಗೆ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿತ್ತು. ಜಿಲ್ಲಾದ್ಯಂತ ಶನಿವಾರ ರಾತ್ರಿಯಿಡೀ ನಿರಂತರ ಮಳೆಯಾಗಿದ್ದರೂ ಮಳೆಯ ತೀವ್ರತೆ ಕೊಂಚ ಕಡಿಮೆ ಇದ್ದುದರಿಂದ ಆತಂಕದ ಪರಿಸ್ಥಿತಿ ಉದ್ಭವಿಸಿಲ್ಲ.
ಗ್ರಾಮೀಣ ಪ್ರದೇಶದ ಕೆಲವೆಡೆ ಕೃಷಿ ಜಮೀನು, ತೋಟಗಳಿಗೆ ನೀರು ನುಗ್ಗಿದೆ. ಸೋಮವಾರವೂ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಅಪಾರ್ಟ್‌ಮೆಂಟ್ ತಡೆಗೋಡೆ ಕುಸಿತ
ಮಳೆಯ ಅಬ್ಬರಕ್ಕೆ ಮಂಗಳೂರಿನ ಕದ್ರಿ ಶಿವಭಾಗ್ ಬಳಿಯ ಅಪಾರ್ಟ್‌ಮೆಂಟ್ ಹಿಂಬದಿಯ ಬೃಹತ್ ಕಾಂಕ್ರಿಟ್ ತಡೆಗೋಡೆ ಕುಸಿದು ಅಪಾರ್ಟ್‌ಮೆಂಟ್‌ನ 2 ಮನೆಗಳಿಗೆ ಹಾನಿಯಾಗಿದೆ. ಬೃಹತ್ ಗುಡ್ಡಕ್ಕೆ ಅಡ್ಡಲಾಗಿ ಕಾಂಕ್ರೀಟಿನಿಂದ ಭಾರೀ ತಡೆಗೋಡೆ ನಿರ್ಮಿಸಲಾಗಿತ್ತು. ನಿರಂತರ ಮಳೆಯಿಂದ ಗುಡ್ಡ ಶಿಥಿಲಗೊಂಡು ತಡೆಗೋಡೆಯನ್ನು ಸೀಳಿ ಭಾರೀ ಪ್ರಮಾಣದ ಕಲ್ಲು- ಮಣ್ಣು ಅಪಾರ್ಟ್‌ಮೆಂಟ್ ನೆಲ ಅಂತಸ್ತಿಗೆ ನುಗ್ಗಿತ್ತು. ಈ ವೇಳೆ ಎರಡು ಫ್ಲ್ಯಾಟ್‌ಗಳ ಬಾಲ್ಕನಿ, ಕಿಟಕಿಯಿಂದ ಭಾರೀ ಮಣ್ಣು ಮನೆಯೊಳಗೆ ಹೋಗಿದೆ. ಎಸಿ ಸೇರಿದಂತೆ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ. ನೆಲ ಅಂತಸ್ತಿನ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಕಾರಿಗೂ ಹಾನಿ ಸಂಭವಿಸಿದೆ.
ಈ ಗುಡ್ಡ ಮತ್ತಷ್ಟು ಕುಸಿಯುವ ಆತಂಕ ಸೃಷ್ಟಿಯಾಗಿದೆ. ತಡೆಗೋಡೆಯ ಮೇಲ್ಭಾಗದಲ್ಲಿರುವ ಮನೆ ಕೂಡ ಅಪಾಯಕ್ಕೆ ಸಿಲುಕಿದೆ ಎಂದು ತಿಳಿದುಬಂದಿದೆ.