ಸ್ಟಾಕ್ ಟ್ರೇಡಿಂಗ್ ವಂಚನೆ: ಪ್ರಕರಣ ದಾಖಲು
ಮಂಗಳೂರು: ಸ್ಟಾಕ್ ಟ್ರೇಡಿಂಗ್ ಮತ್ತು ದುಬೈನಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ 17.82 ಲಕ್ಷ ರೂ. ವಂಚಿಸಿದ ಬಗ್ಗೆ ಪಾಂಡೇಶ್ವರ ಠಾಣೆಗೆ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಫೇಸ್‌ಬುಕ್‌ನಲ್ಲಿ ಬಂದ ಸ್ಟಾಕ್ ಟ್ರೇಡಿಂಗ್ ಜಾಹೀರಾತನ್ನು ಗಮನಿಸಿದ ತಾನು ಆ ಲಿಂಕ್ ಕ್ಲಿಕ್ ಮಾಡಿದೆ. ಈ ವೇಳೆ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಸೇರ್ಪಡೆಗೊಂಡಿದ್ದೆ. ಆ ಗ್ರೂಪ್‌ನಲ್ಲಿದ್ದ ಮರಿಲೇನಾ ಮತ್ತು ಜೋನಾಥನ್ ಸೈಮನ್ ಎಂಬವರು ಶೇ.18ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅದರಂತೆ ಹಂತ ಹಂತ ವಾಗಿ ತಾನು 15.52 ಲಕ್ಷ ರೂ. ಹೂಡಿಕೆ ಮಾಡಿದ್ದೆ. ಬಳಿಕ ಇನ್ನೊಂದು ಗ್ರೂಪ್‌ಗೆ ತಾನು ಸೇರ್ಪಡೆಯಾ ಗಿದ್ದು, ಅದರಲ್ಲಿದ್ದ ಪೌಲ್ಸನ್ ಅಗಸ್ಟಿನ್ ಎಂಬಾತ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾನೆ. ಹಾಗೇ ಮೆಸೇಜ್ ಮೂಲಕ ಫುಡ್‌ಎಕ್ಸ್‌ಪೋರ್ಟ್ ಬಗ್ಗೆ ಆತನಲ್ಲಿ ಚರ್ಚಿಸಿದಾಗ ದುಬಾ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದು ನಂಬಿಸಿದ್ದ. ಪ್ರತಿ ಅಭ್ಯರ್ಥಿಗೆ 2.50 ಲಕ್ಷ ರೂ. ಶುಲ್ಕವಾಗಿ ನೀಡಬೇಕು ಎಂದು ತಿಳಿಸಿದ್ದ. ಅದರಂತೆ 2.30 ಲಕ್ಷ ರೂ. ಪಾವತಿ ಮಾಡಿದ್ದೆ. ಆದರೆ ನಂತರ ಆತ ಉದ್ಯೋಗ ನೀಡದೆ ವಂಚಿಸಿದ್ದಾನೆ. ಈ ಎರಡು ಪ್ರಕರಣದಲ್ಲಿ ತನಗೆ 17.82 ಲಕ್ಷ ರೂ. ಮೋಸವಾಗಿದೆ ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.