×
Ad

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಅವ್ಯವಹಾರ, ಭ್ರಷ್ಟಾಚಾರದ ಆರೋಪ: ಲೋಕಾಯುಕ್ತ ದಾಳಿ

Update: 2025-06-21 21:05 IST

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯಲ್ಲಿ ಅವ್ಯವಹಾರ, ಭ್ರಷ್ಟಾಚಾರದ ಆರೋಪ ಹಿನ್ನಲೆ ಯಲ್ಲಿ ಲೋಕಾಯುಕ್ತ ದ.ಕ. ಜಿಲ್ಲಾ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ನೇತೃತ್ವದಲ್ಲಿ ದ.ಕ.ಮತ್ತು ಉಡುಪಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಶನಿವಾರ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭ ಆರೋಪಕ್ಕೆ ಸಂಬಂಧಪಟ್ಟ ಕೆಲವು ದಾಖಲೆ ಪತ್ರಗಳು ಲಭಿಸಿದೆ ಎನ್ನಲಾಗಿದೆ.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಏಜೆಂಟರ ಹಾವಳಿ ಹಾಗೂ ಭ್ರಷ್ಟಾಚಾರ ಮಿತಿ ಮೀರಿದ್ದು, ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತ ಸಮಯಕ್ಕೆ ಕಡತಗಳು ವಿಲೇವಾರಿಯಾಗದೆ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವ ಬಗ್ಗೆ ಲೋಕಾಯುಕ್ತರಿಗೆ ದೂರುಗಳು ಬಂದಿದ್ದವು. ಹಾಗಾಗಿ ಶನಿವಾರ ದ.ಕ. ಮತ್ತು ಉಡುಪಿ ಲೋಕಾಯುಕ್ತ ಅಧಿಕಾರಿಗಳು 6 ತಂಡದಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ಮಹಾನಗರಪಾಲಿಕೆಯ ಇಂಜಿನಿಯರ್, ಆಹಾರ, ಕಂದಾಯ ವಿಭಾಗದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಮಹಾನಗರಪಾಲಿಕೆಯಲ್ಲಿ ಏಜೆಂಟರೇ ತುಂಬಿದ್ದು, ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯ ಡಿವೈಎಸ್ಪಿಗಳಾದ ಡಾ.ಗಾನ ಪಿ.ಕುಮಾರ್, ಸುರೇಶ್ ಕುಮಾರ್ ಪಿ., ಇನ್‌ಸ್ಪೆಕ್ಟರ್‌ಗಳಾದ ಭಾರತಿ ಜಿ., ಚಂದ್ರಶೇಖರ್ ಕೆ.ಎನ್., ಮಂಜುನಾಥ್, ರಾಜೇಂದ್ರ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News