×
Ad

ಕಷ್ಟ ಅನುಭವಿಸಿದವರಿಗೆ ಇನ್ನೊಬ್ಬರ ಕಷ್ಟದ ಅರಿವಾಗುತ್ತದೆ: ಶಾಸಕ ಅಶೋಕ್ ಕುಮಾರ್ ರೈ

Update: 2025-06-21 22:22 IST

ಪುತ್ತೂರು: ಜನಸೇವೆ ಮಾಡುವುದು ಅಷ್ಟೊಂದು ಸುಲಭದ ಕೆಸಲವಲ್ಲ. ಕಷ್ಟಗಳನ್ನು ಅನುಭವಿಸಿದವರಿಗೆ ಮಾತ್ರ ಇನ್ನೊಬ್ಬರ ಕಷ್ಟಗಳ ಅರಿವಾಗುತ್ತದೆ. ಎಂ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಈ ನಿಟ್ಟಿನಲ್ಲಿ ಬಹಳ ಪ್ರಾಮಾಣಿಕವಾಗಿ ಜನಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ವತಿಯಿಂದ ನಡೆಸಲ್ಪಡುವ `ಕ್ಲಾನ್ ಆನ್ ವೀಲ್ಸ್' ಗ್ರಾಮೀಣ ವಿದ್ಯಾರ್ಥಿಗಳ ಕಂಪ್ಯೂಟರ್ ಕಲಿಕಾ ಬಸ್‌ನ ಶಾಶ್ವತ ಪ್ರಾಯೋಜಕತ್ವವನ್ನು ಬಜ್ಪೆಗುತ್ತು ದಿ. ಹಾಜಿ ಬಿ ಶೇಕುಂಞ ಸ್ಮರಣಾರ್ಥ ಅವರ ಪುತ್ರ ಝಕರಿಯಾ ಜೋಕಟ್ಟೆ (ಅಲ್ ಮುಝೈನ್) ಪಡೆದುಕೊಂಡಿದ್ದು, ಈ ಕಾರ್ಯಕ್ರಮವನ್ನು ಶನಿವಾರ ಪುತ್ತೂರಿನ ಚುಂಚಶ್ರೀ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕರು ಉದ್ಘಾಟಿಸಿ ಮಾತನಾಡಿದರು.

ನಾನೂ ಒಂದು ಟ್ರಸ್ಟ್ ನಡೆಸುತ್ತಿದ್ದು ಇಂತಹ ಟ್ರಸ್ಟ್ಗಳು ಜನರ ಕಷ್ಟಗಳಿಗೆ ಸ್ಪಂಧಿಸಲು ಸಾಧ್ಯವಿದೆ ಎಂಬ ವಿಚಾರ ಮತ್ತು ಆ ಬಗ್ಗೆ ಸ್ಪಷ್ಟವಾದ ಅರಿವು ನನಗಿದೆ. ದುಡ್ಡಿದ್ದ ಮಾತ್ರಕ್ಕೆ ಜನಸೇವೆ ಮಾಡಬಹುದು ಎಂದು ಹೇಳಲಾಗುವುದಿಲ್ಲ. ಅದು ಅಷ್ಟೊಂದು ಸುಲಭವೂ ಅಲ್ಲ. ಇದಕ್ಕೆ ತುಂಬಾ ಪ್ರಾಮಾಣಿಕತೆ ಮತ್ತು ಕಾಳಜಿ ಇರಬೇಕು. ತ್ಯಾಗ ಮನೋಭಾವ ಇರಬೇಕು. ಬಾಲ್ಯದಲ್ಲಿ ಕಷ್ಟ ಪಟ್ಟವರಿಗೆ ಮಾತ್ರ ಇನ್ನೊಬ್ಬರ ಕಷ್ಟ ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿ ಎಂ ಪ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ದೇಶ ಮತ್ತು ದೇವರು ಮೆಚ್ಚು ವಂತಹ ಮಾದರಿಯಾದ ಕೆಲಸ ಮಾಡುತ್ತಿದೆ ಎಂದರು.

ಬಡವರ ಕಷ್ಟವನ್ನು ಮನಗಂಡು ರೈ ಎಸ್ಟೇಟ್ ಚಾರಿಟೇಬಲ್ ಟ್ರಸ್ಟ್ನ ಮೂಲಕ ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರದ ಸುಮಾರು 600 ಮಂದಿಗೆ ಮನೆ ನಿರ್ಮಿಸಿ ಕೊಡಲು ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ವಿಟ್ಲದಲ್ಲಿ ಜಮೀನು ಖರೀದಿ ಮಾಡಲಾಗಿದೆ. ಅದರಲ್ಲಿ ಪ್ರಥಮ ಹಂತವಾಗಿ ಸುಮಾರು 300 ಮನೆಗಳನ್ನು ನಿರ್ಮಿಸಲು ಮುಂದಡಿ ಇಡಲಾಗಿದೆ. ಮನೆ ನಿರ್ಮಾಣಕ್ಕೆ ಎಂ. ಫ್ರೆಂಡ್ ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ವೇದಿಕೆಯಲ್ಲಿದ್ದ ಝಕರಿಯಾ ಜೋಕಟ್ಟೆ ಅವರ ಸಹಾಯ ನೀಡಬೇಕು ಎಂದ ಶಾಸಕರು ಇದರಲ್ಲಿ ಸಹಾಯ ನೀಡಿದವರು ಹೇಳಿದ ಬಡವರಿಗೆ 5 ಮನೆ ಹಾಗೂ ಎಂ. ಫ್ರಂಡ್ಸ್ ಹೇಳಿದ ಬಡವರಿಗೆ 3 ಮನೆಯಲ್ಲಿ ಆದ್ಯತೆಯಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಝಕರಿಯಾ ಜೋಕಟ್ಟೆ ಮಾತನಾಡಿ ನಾವೆಲ್ಲರೂ ಸೇರಿಕೊಂಡು ಜಾತಿ, ಮತ ಬೇಧವಿಲ್ಲದ ಸೌಹಾರ್ಧತೆಯೊಂದಿಗೆ ಜೀವಿಸುವ ಜಿಲ್ಲೆಯನ್ನು ನಿರ್ಮಿಸಲು ಪ್ರಯತ್ನ ನಡೆಸಬೇಕು. ನಮ್ಮ ಜಿಲ್ಲೆಯು ಉತ್ತಮ ಪ್ರವಾಸಿ ಪ್ರದೇಶವಾಗಿ ಎಲ್ಲರನ್ನೂ ಆಕರ್ಷಿಸಬೇಕು. ಅದಕ್ಕಾಗಿ ನಾನು ರಾಜ್ಯದ ಮಂತ್ರಿಗಳ ಜೊತೆಗೂ ಚರ್ಚೆ ನಡೆಸಿದ್ದೇನೆ. ನನಗೆ ಸಮಾಜ ಸೇವೆ ಮಾಡಲು ಪ್ರೇರಣೆ ನೀಡಿದವರು ಎಂ. ಫ್ರೆಂಡ್ಸ್ ಸಂಸ್ಥಾಪಕ ರಶೀದ್ ವಿಟ್ಲ. ಅವರಿಂದಾಗಿ ನನ್ನ ಜನಸೇವೆಯ ಕಾರ್ಯ ಸಾಧ್ಯವಾಯಿತು. ಪುತ್ತೂರಿನ ಶಾಸಕರು ಅನೇಕ ಜನಪರ ಕೆಲಸಗಳನ್ನು ಮಾಡುತ್ತಿದ್ದು, ಅವರ ಉತ್ತಮ ಕೆಲಸಗಳ ಜೊತೆಗೆ ನಾನೂ ಕೈಜೋಡಿಸುತ್ತೇನೆ. ದಾನ ಮಾಡಿ ಯಾರೂ ಕೆಟ್ಟವರಿಲ್ಲ. ದಾನಕ್ಕೆ ಜನರ ಆಶೀರ್ವಾದವಿರುತ್ತದೆ. ಯಾವುದೇ ಕಾರಣಕ್ಕೂ ದಾನವನ್ನು ನಿಲ್ಲಿಸಬಾರದು ಎಂದು ಹೇಳಿದ ಅವರು ಬಾಲ್ಯದಲ್ಲಿ ನಾನೂ ಸಾಕಷ್ಟು ಬಡತನದ ನೋವು ಅನುಭವಿಸಿದ್ದೇನೆ ಎಂದು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಎಂ ಫ್ರೆಂಡ್ಸ್ ನೇತೃತ್ವದಲ್ಲಿ ಕ್ಲಾಸ್ ಆನ್ ವೀಲ್ಸ್ ಮೂಲಕ ಕಳೆದ ಒಂದೂವರೆ ವರ್ಷಗಳಲ್ಲಿ 50 ಸರ್ಕಾರಿ ಹಾಗೂ 25 ಕೇಂದ್ರಗಳಲ್ಲಿ ನಡೆಸಲಾದ ಕಂಪ್ಯೂಟರ್ ತರಗತಿಯಲ್ಲಿ ಕಂಪ್ಯೂಟರ್ ಮೂಲ ಶಿಕ್ಷಣ ಪಡೆದಿರುವ 3650 ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಕಾರುಣ್ಯ ಸಂಸ್ಥೆಯ ಮುಖ್ಯಸ್ಥ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುಜಾಹ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಆರಿಫ್ ಪಡುಬಿದ್ರಿ ಉಪಸ್ಥಿತರಿದ್ದರು.

ಎಂ. ಫ್ರೆಂಡ್ಸ್ ಸಂಸ್ಥಾಪಕ ರಶೀದ್ ವಿಟ್ಲ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಕಿರ್ ಹಾಜಿ ವಂದಿಸಿದರು. ಮಹಮ್ಮದಲಿ ಕಮ್ಮರಡಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News