ಉಳಾಯಿಬೆಟ್ಟು ದರೋಡೆ ಪ್ರಕರಣ: ವರ್ಷವಾದರೂ ಸಿಗದ ಚಿನ್ನಾಭರಣ, ನಗದು
ಮಂಗಳೂರು, ಜೂ.22: ಉಳಾಯಿಬೆಟ್ಟು ಕಾಯರ್‌ಪದವು ನಿವಾಸಿ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ ಕೋಟ್ಯಾನ್‌ರ ಮನೆಗೆ ದರೋಡೆಕೋರರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ದೋಚಿದ ಪ್ರಕರಣಕ್ಕೆ ವರ್ಷವಾದರೂ ಕೂಡ ಇನ್ನೂ ಅದು ಪತ್ತೆಯಾಗಿಲ್ಲ.
ವರ್ಷದ ಹಿಂದೆ ಅಂದರೆ 2024ರ ಜೂ.21ರ ರಾತ್ರಿ 8ಕ್ಕೆ ದರೋಡೆಕೋರರು ಮನೆಯೊಳಗೆ ನುಗ್ಗಿ ಪದ್ಮನಾಭ ಕೋಟ್ಯಾನ್ ಅವರನ್ನು ಕಟ್ಟಿಹಾಕಿ ಚೂರಿಯಿಂದ ಹಲ್ಲೆ ನಡೆಸಿದ್ದಲ್ಲದೆ, ಅವರ ಪತ್ನಿ ಶಶಿಪ್ರಭಾ ಕೋಟ್ಯಾನ್, ಪುತ್ರ ಪ್ರಥಮ್‌ನ ಮೇಲು ಹಲ್ಲೆಗೆ ಮುಂದಾಗಿದ್ದರು. ಬಳಿಕ ಡ್ರವರ್‌ನಲ್ಲಿದ್ದ 40 ಗ್ರಾಂ ಚಿನ್ನದ ಕಡಗ, ನೆಕ್ಲೆಸ್, ಚಿನ್ನದ ಉಂಗುರ 2, ನಗದು ಇರುವ ಬ್ಯಾಗ್‌ಗಳನ್ನು ದೋಚಿದ್ದರು. 20 ದಿನದ ಬಳಿಕ ದ.ಕ. ಜಿಲ್ಲೆಯ ಇಬ್ಬರು ಹಾಗೂ ಕೇರಳದ 11ಮಂದಿ ಸಹಿತ 13 ಮಂದಿ ಆರೋಪಿಗಳನ್ನು ಬಂಧಿಸಲಾ ಗಿತ್ತು. ಈ ವೇಳೆ ಒಂದು ನೆಕ್ಲೆಸ್ ಮಾತ್ರ ಪೊಲೀಸರಿಗೆ ಲಭಿಸಿತ್ತು. ಆದರೆ ಉಳಿದ ನಗ-ನಗದು ಇನ್ನೂ ಪತ್ತೆಯಾಗಿಲ್ಲ ಎಂಬ ಅಂಶದ ಬಗ್ಗೆ ಸ್ಥಳೀಯವಾಗಿ ಚರ್ಚೆಯಾಗುತ್ತಿವೆ.