ಉಡುಪಿ ಜಿಲ್ಲೆಯಾದ್ಯಂತ ಮಳೆ: ಹಲವು ಮನೆಗಳಿಗೆ ಹಾನಿ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಮತ್ತೆ ಬಿರುಸಿನ ಮಳೆ ಆರಂಭವಾಗಿದ್ದು, ಇದರಿಂದ ಕಾರ್ಕಳ ಹಾಗೂ ಕುಂದಾಪುರ ತಾಲೂಕಿನ ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಕಾರ್ಕಳ-35.0ಮಿ.ಮೀ., ಕುಂದಾಪುರ- 18.0ಮಿ.ಮೀ., ಉಡುಪಿ- 13.4ಮಿ.ಮೀ., ಬೈಂದೂರು-17.8ಮಿ.ಮೀ., ಬ್ರಹ್ಮಾವರ-10.8ಮಿ.ಮೀ., ಕಾಪು- 19.0ಮಿ.ಮೀ., ಹೆಬ್ರಿ- 14.0ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 19.8ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಉಳ್ತೂರು ಗ್ರಾಮದ ರಾಧಿಕಾ ದೇವಾಡಿಗ, ಗಂಗೊಳ್ಳಿಯ ಸಂತೋಷ ಖಾರ್ವಿ ಹಾಗೂ ಹೆಮ್ಮಾಡಿ ಗ್ರಾಮದ ವೈಶಾಲಿ ಎಂಬವರ ಮನೆಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದು, ಇದರಿಂದ ಒಟ್ಟು 30,000ರೂ. ನಷ್ಟ ಉಂಟಾಗಿದೆ.
ಅದೇ ರೀತಿ ಕಾರ್ಕಳ ತಾಲೂಕಿನ ನಿಂಜೂರು ಗ್ರಾಮದ ನಿತ್ಯಾನಂದ ನಾಯಕ್ ಹಾಗೂ ದೇವೆಂದ್ರ ನಾಯಕ್ ಎಂಬವರ ಮನೆಗಳು ಭಾರೀ ಗಾಳಿ ಮಳೆಯಿಂದ ಹಾನಿಯಾಗಿದ್ದು, ಇದರಿಂದ ಒಟ್ಟು 40ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.