×
Ad

ಅಂಬೇಡ್ಕರ್‌ಗೆ ಕಾಂಗ್ರೆಸ್ ಸರ್ಕಾರ ಅಗೌರವ ತೋರುತ್ತಿದೆ: ಸಂಸದ ಬ್ರಿಜೇಶ್ ಚೌಟ ಆರೋಪ

Update: 2025-06-23 22:37 IST

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡದ ಅಭಿವೃದ್ಧಿಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಮರೆತಿದ್ದು, ಜನವಿರೋಧಿ ಕಾಂಗ್ರೆಸ್ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆ ಯುವುದಕ್ಕೆ ಜನಾಂದೋಲವನ್ನು ರೂಪಿಸುವವರೆಗೆ ಬಿಜೆಪಿ ವಿರಮಿಸುವುದಿಲ್ಲ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.

ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಕ್ಷವು ಗುರುಪುರ ಗ್ರಾಮ ಪಂಚಾಯತ್ ಕಚೇರಿ ಮುಂದೆ ಇಂದು ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅನಾಚಾರ, ದುರಾಡಳಿತ, ಜನ ವಿರೋಧಿ ನೀತಿಗಳಿಂದಾಗಿ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಹೇರಬೇಕಾದ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರದ ಜನವಿರೋಧಿ ನೀತಿಗಳಿಂದಾಗಿ ಜನರೇ ಬೀದಿಗಿಳಿಯುವ ಕಾಲ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಡಳಿತ ವಿಕೇಂದ್ರೀಕರಣ ಡಾ. ಅಂಬೇಡ್ಕರ್ ಅವರ ಕನಸು; ಅದು ಸಂವಿಧಾನದ ಆಶಯ ಕೂಡಾ ಹೌದು. ಆದರೆ, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದಲ್ಲಿ ಗ್ರಾಮ ಪಂಚಾಯತ್, ನಗರಸಭೆ, ಪುರಸಭೆಯಿಂದ ಹಿಡಿದು ಪಾಲಿಕೆವರೆಗೆ ಎಲ್ಲಾ ಕಡೆ ಸ್ಥಳೀಯಾಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ. ಗ್ರಾಮ ಪಂಚಾಯತ್‌ಗಳು ನೀಡುತ್ತಿದ್ದ ಏಕ ವಿನ್ಯಾಸ ನಕ್ಷೆಯಾದ 9/11 ವಿತರಣೆಯ ಹಕ್ಕನ್ನು ಗ್ರಾಮ ಪಂಚಾ ಯತ್ ಮತ್ತು ತಾಲೂಕು ಪಂಚಾಯತ್ ಅಧಿಕಾರವನ್ನು ಮೊಟಕುಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವರ್ಗಾಯಿಸಲಾಗಿದೆ. ಸಿಂಗಲ್ ಸೈಟ್‌ನಲ್ಲಿ ಮನೆ ಕಟ್ಟಲು ಸಾಧ್ಯವಾಗದೇ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವಂತಾಗಿದೆ. ಸರಳವಾಗಿದ್ದ ಈ ನಿಯಮ ಜಟಿಲಗೊಳಿಸಿರುವ ಕಾಂಗ್ರೆಸ್ ಸರಕಾರ ಈ ಮೂಲಕವೂ ಮಧ್ಯವರ್ತಿಗಳ ದಂಧೆ ಮಾಡಲು ಅವಕಾಶ ಕೊಟ್ಟಿದೆ. ಚುನಾವಣೆ ವೇಳೆ ಗ್ಯಾರಂಟಿ, ಉಚಿತ ಯೋಜನೆಗಳ ಘೋಷಣೆ ಮಾಡಿ ಜನರನ್ನು ಮೋಸದ ಬಲೆಗೆ ಬೀಳಿಸಿ ಇದೀಗ ವಾಮ ಮಾರ್ಗಗಳ ಮೂಲಕ ಜನರು ಬೆವರು ಸುರಿಸಿ ದುಡಿದ ಹಣವನ್ನೇ ಕಸಿದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರಕಾರಕ್ಕೆ ಒಂದೇ ಒಂದು ಮನೆಯನ್ನು ಹಸ್ತಾಂತರಿಸಲು ಸಾಧ್ಯವಾಗಿಲ್ಲ. ಇನ್ನು ವೃದ್ಧಾಪ್ಯ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸಿದ್ದರಾಮಯ್ಯ ಸರಕಾರ ಆದೇಶಿಸಿದೆ. ಹೀಗಿರುವಾಗ, ರಾಜ್ಯದಲ್ಲಿ ಅಭಿವೃದ್ಧಿಯೂ ಇಲ್ಲ, ಅತ್ತ ಗ್ಯಾರಂಟಿಗಳನ್ನು ನಂಬಿದ್ದ ಬಡವರ ಗೋಳು ಕೇಳುವವರಿಲ್ಲ. ಫಲಾನುಭವಿ ಗಳಿಗೆ ಪಿಂಚಣಿಯೂ ಇಲ್ಲದೆ ಹಿರಿಯ ನಾಗರಿಕರ ಬದುಕನ್ನು ತೀರಾ ಕೆಟ್ಟ ಪರಿಸ್ಥಿತಿಗೆ ತಳ್ಳಿದೆ ಎಂದು ಚೌಟ ಆರೋಪಿಸಿದರು.

ಪ್ರತಿಭಟನಾ ಸಭೆ ಬಳಿಕ ಸಂಸದ ಚೌಟ ಹಾಗೂ ಬಿಜೆಪಿಯ ಗುರುಪುರ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕರ ವಿ. ಶೆಟ್ಟಿ ನೇತೃತ್ವದ ಬಿಜೆಪಿ ನಿಯೋಗವು ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಪಂಕಜಾ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News