×
Ad

ವಿಯೇಟ್ನಾಂ ಕಡಲ ತಡಿಯಲ್ಲಿ ಯೋಗ ದಿನಾಚರಣೆ| ಪುತ್ತೂರಿನ ಬಾಲಕೃಷ್ಣ ಗೌಡರಿಂದ ತರಬೇತಿ

Update: 2025-06-23 23:15 IST

ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಯುವಕನೋರ್ವ ವಿಯೇಟ್ನಾಂ ದೇಶದಲ್ಲಿ ಕಳೆದೊಂದು ದಶಕ ದಿಂದ ಯೋಗಾಭ್ಯಾಸ ಶಿಕ್ಷಕನಾಗಿದ್ದು, ಅಂತರಾಷ್ಟ್ರೀಯ ಯೋಗ ದಿನದಂದು ಕಡಲ ತಡಿಯಲ್ಲಿ ಯೋಗ ದಿನಾಚರಣೆಯನ್ನು ನಡೆಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಕಾಲೇಜು ಶಿಕ್ಷಣವನ್ನು ಪೂರೈಸಿ ಯೋಗ ಶಿಕ್ಷಣದಲ್ಲಿ ಪದವಿ ಪಡೆದು ವಿಯೇಟ್ನಾಂ ದೇಶದಲ್ಲಿರುವ ಬಾಲಕೃಷ್ಣ ಗೌಡ ಅವರು, ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಕಡ್ತಿಮಾರ್ ಮನೆ ನಿವಾಸಿ ಧರ್ಣಪ್ಪ ಗೌಡ ಮತ್ತು ಹರಿಣಾಕ್ಷಿ ದಂಪತಿಯ ಪುತ್ರ. ಈಗ ಯೋಗ ಶಿಕ್ಷಕನಾಗಿ ವಿಯೇಟ್ನಾಂ ದೇಶದಲ್ಲಿರುವ ಇವರು ಹತ್ತು ವರ್ಷಗಳಿಂದ ಅಲ್ಲೇ ವೃತ್ತಿ ನಿರತರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ದೇಹಾರೋಗ್ಯಕ್ಕೆ ಮತ್ತು ದೇಹಾಕೃತಿಗೆ ವಿಶೇಷ ಗಮನ ನೀಡುತ್ತಿರುವ ವಿಯೇಟ್ನಾಂ ದೇಶಿಗರಿಗೆ ಭಾರತವೆಂದರೆ ತುಂಬಾ ಪ್ರೀತಿ. ಭಾರತದ ಯೋಗಾಭ್ಯಾಸವೆಂದರೆ ಭಾರೀ ಗೌರವ. ಈ ದೇಶದ ಜನತೆ ಯೋಗಾಭ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಯೋಗ ಶಿಕ್ಷಕನಾಗಿರುವ ನಮ್ಮನ್ನು ಅವರ ಮನೆ ಮಗನಂತೆ ಕಾಣುತ್ತಿದ್ದಾರೆ. ನಿತ್ಯ ಯೋಗವಿದ್ದರೂ, ಅಂತರಾಷ್ಟ್ರೀಯ ಯೋಗ ದಿನಕ್ಕೆ ಇಲ್ಲಿ ವಿಶೇಷ ಮಾನ್ಯತೆ ಇದೆ. ಅದಕ್ಕಾಗಿ ಬೆಳಗ್ಗಿನಿಂದ ರಾತ್ರಿವರೆಗೂ ಹಲವೆಡೆ ಸಾಮೂಹಿಕ ಯೋಗಾಭ್ಯಾಸ ಕಾರ್ಯಕ್ರಮಗಳು ನಡೆಯುತ್ತಿತ್ತು. ನಮ್ಮ ಯೋಗ ಶಿಕ್ಷಣ ಕೇಂದ್ರದಿಂದ ವಿಯೇಟ್ನಾಂ ದೇಶದ ಹೈಪಾಂಗ್ ನಗರದ ಕಡಲ ಕಿನಾರೆಯಲ್ಲಿ ಆಕರ್ಷಕ ವಿನ್ಯಾಸಗಳನ್ನು ರೂಪಿಸಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಎಂದು ತಿಳಿಸಿದ್ದಾರೆ.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News