ಬೆಂಗಳೂರು ರಾತ್ರಿ ರೈಲು ಸಮಯ ಪಾಲನೆಗೆ ಮನವಿ
ಮಂಗಳೂರು, ಜೂ. 26: ಮಂಗಳೂರು ಜಂಕ್ಷನ್ ಮೂಲಕ ಸಂಚರಿಸುತ್ತಿರುವ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್ ರಾತ್ರಿ ರೈಲು (16511) ಹಾಸನ ಮತ್ತು ಪಡೀಲ್ ನಡುವೆ ದಿನಂಪ್ರತಿ ವಿಳಂಬವಾಗಿ ಸಂಚರಿಸುತ್ತಿದ್ದು, ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ನೈರುತ್ಯ ರೈಲ್ವೆ (ಮೈಸೂರು) ವಿಭಾಗೀಯ ರೈಲ್ವೆ ಪ್ರಬಂಧಕರಿಗೆ ಪಾಲಕ್ಕಾಡ್ ರೈಲ್ವೆ ವಿಭಾಗೀಯ ಸಲಹಾ ಸಮಿತಿ ಸದಸ್ಯ, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಅವರು ಮನವಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜಧಾನಿ ಮತ್ತು ಮಂಗಳೂರು ಭಾಗವನ್ನು ಸಂಪರ್ಕಿಸುವ ಸಮೀಪ ಮಾರ್ಗ ಹಾಸನ - ಕುಣಿಗಲ್ ಮೂಲಕ ಪ್ರಯಾಣಿಸುವ ಈ ರೈಲನ್ನು ಗರಿಷ್ಠ ಸಂಖ್ಯೆಯ ಪ್ರಯಾಣಿಕರು ಅವಲಂಬಿಸಿದ್ದು, ಪ್ರಯಾಣಿಕರ ಆಸನಗಳು ಭರ್ತಿಯಾಗಿ ಕಾಯುವವರ ಪಟ್ಟಿ (ವೈಟಿಂಗ್ ಲಿಸ್ಟ್) ಇರುವುದು ಸಾಮಾನ್ಯ ವಾಗಿದೆ. ಈ ರೈಲು ವಿಳಂಬದಿಂದ ಕಚೇರಿಗಳಿಗೆ ತೆರಳುವವರು, ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಯಾಗುತ್ತಿದೆ. ವಿಷಯ ಸಂಬಂಧಿಸಿ ವಿವಿಧ ವೇದಿಕೆಗಳ ಮೂಲಕ ಹಲವು ಬಾರಿ ದೂರುಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಎಡಕುಮೇರಿ ಸಮೀಪ ಭೂಕುಸಿತ ಸಂಭವಿಸಿತ ಸಂಭವಿಸಿದ ಅಂದರ್ಭ ಈ ಮಾರ್ಗ ರೈಲುಗಳ ಓಡಾಟ ವಿಳಂಬವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ರೈಲು ವಿಳಂಬವಾಗುವುದನ್ನು ಪ್ರಯಾಣಿ ಕರು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ವಿದ್ಯುದೀಕರಣ ಬಾಕಿ ಕಾಮಗಾರಿ ನಡೆಯುತ್ತಿರುವ ಕಾರಣ ಹಗಲು ರೈಲುಗಳು (16575/ 76 ಮತ್ತು 16539/ 40) ಕೂಡ ರದ್ದುಗೊಂಡಿರುವ ಕಾರಣ ರಾತ್ರಿ ರೈಲಿನ ಆವಶ್ಯಕತೆ ಪ್ರಯಾಣಿಕರಿಗೆ ಹಿಂದಿಗಿಂತಲೂ ಹೆಚ್ಚಿದೆ ಎಂದು ಮನವಿಯಲ್ಲಿ ಸಮಸ್ಯೆಯ ತೀವ್ರತೆಯನ್ನು ನಮೂದಿಸಲಾಗಿದೆ.