ಮಣ್ಣಗುಂಡಿಯಲ್ಲಿ ಹೆದ್ದಾರಿಗೆ ಮತ್ತೆ ಗುಡ್ಡ ಕುಸಿತ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ಮಣ್ಣಗುಂಡಿಯಲ್ಲಿ ಜೂ.26ರಂದು ಮತ್ತೆ ಗುಡ್ಡ ಕುಸಿತಗೊಂಡು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ತಾಸು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಎರಡು ದಿನದ ಹಿಂದೆ ಇಲ್ಲಿ ಗುಡ್ಡ ಜರಿದು ರಸ್ತೆಗೆ ಮಣ್ಣು ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಇದೀಗ ಜೂ.26ರಂದು ಮತ್ತೆ ಮಣ್ಣು ಕುಸಿತಗೊಂಡು ಮರ, ಗಿಡಗಳ ಸಮೇತ ರಸ್ತೆಗೆ ಬಿದ್ದಿತ್ತು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 2 ಗಂಟೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಎರಡು ಕಡೆಯೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಣ್ಣು ತೆರವುಗೊಳಿಸಿದ ಬಳಿಕ ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಪುನರಾರಂಭಗೊಂಡಿದೆ.
ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳದಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದರು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಇಲ್ಲಿ ಗುಡ್ಡ ಅಗೆಯಲಾಗಿದೆ. ಈಗ ಭಾರೀ ಮಳೆಯಾಗುತ್ತಿರುವುದರಿಂದ ಮಣ್ಣು ಸಡಿಲಗೊಂಡು ಪದೇ ಪದೇ ಗುಡ್ಡ ಜರಿತಕ್ಕೆ ಒಳಗಾಗುತ್ತಿದೆ.