×
Ad

ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಜಿ.ಪ. ಸದಸ್ಯ, ನ್ಯಾಯವಾದಿ ಕುಂಞಿಪಳ್ಳಿ ನಿಧನ

Update: 2025-06-27 19:20 IST

ಸುಳ್ಯ: ಹಿರಿಯ ಕಾಂಗ್ರೆಸ್ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ, ನೋಟರಿ ವಕೀಲರಾದ ಐ.ಕುಂಞಿಪಳ್ಳಿ (87) ಶುಕ್ರವಾರ ಪೈಚಾರಿನ ಮನೆಯಲ್ಲಿ ನಿಧನರಾದರು.

ನ್ಯಾಯವಾದಿಯಾಗಿ, ನೋಟರಿಯಾಗಿ, ರಾಜಕಾರಿಣಿಯಾಗಿ, ಜನಪ್ರತಿನಿಧಿಯಾಗಿದ್ದ ಕುಂಞಿಪಳ್ಳಿ ಅವರು ಕೇನ್ಯ ಗ್ರಾಮದ ಪ್ರತಿಷ್ಠಿತ ಐವತ್ತೊಕ್ಲು ಮನೆಯ ಪ್ರಗತಿಪರ ಕೃಷಿಕ ಕುಟುಂಬದಲ್ಲಿ ಜನಿಸಿದ್ದರು.

ಕಾನೂನು ಪದವಿ (ಬಿ.ಎಲ್) ಯನ್ನು ಉನ್ನತ ಶ್ರೇಣಿಯಲ್ಲಿ ಪಡೆದುಕೊಂಡ ಅವರು ಸುಳ್ಯ ತಾಲೂಕಿನ ಮುಸ್ಲಿಂ ಸಮುದಾಯದಲ್ಲಿ ಮೊತ್ತ ಮೊದಲ ಕಾನೂನು ಪದವೀಧರ ಎಂಬ ಹಿರಿಮೆಗೆ ಪಾತ್ರರಾದರು. ಕಾನೂನು ಪದವಿ ಪಡೆದ ನಂತರ ಇವರು ಮಂಗಳೂರಿನಲ್ಲಿ, ಪುತ್ತೂರಿನಲ್ಲಿ ವಕೀಲಿ ವೃತ್ತಿ ನಡೆಸಿ 1969ರಲ್ಲಿ ಸುಳ್ಯದಲ್ಲಿ ನ್ಯಾಯಾಲಯ ಆರಂಭಗೊಂಡಾಗ ತನ್ನ ವೃತ್ತಿ ಸೇವೆಯನ್ನು ಸುಳ್ಯದಲ್ಲಿ ಆರಂಭಿಸಿದರು.

ಪಂಜ ತಾಲೂಕು ಬೋರ್ಡ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸುಳ್ಯ ತಾಲೂಕು ಅಭಿವೃದ್ಧಿ ಮಂಡಳಿಗೆ ಸ್ಪರ್ಧಿಸಿ ಗೆಲುವು ಪಡೆದರು. ಸುಳ್ಯ ತಾಲೂಕು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ 3 ವರ್ಷ ಸೇವೆ ಸಲ್ಲಿಸಿದ್ದರು. ಸುಳ್ಯ ಜಿಲ್ಲಾ ಪರಿಷತ್ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಹಾಗೂ ಜನತಾ ಪಕ್ಷದ ಅಭ್ಯರ್ಥಿ ಎಂ.ಬಿ. ಸದಾಶಿವ ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ದ.ಕ.ಜಿಲ್ಲಾ ಪರಿಷತ್‍ನ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿಯೂ ಕಾರ್ಯನಿರ್ವಹಿಸಿದರು. ದ.ಕ. ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗದ ಉಪಾಧ್ಯಕ್ಷರಾಗಿಯಾಗಿಯೂ ಕಾರ್ಯನಿರ್ವಹಿಸಿದರು. 1993ರಲ್ಲಿ ಇವರು ಕರ್ನಾಟಕ ರಾಜ್ಯ ನೋಟರಿಯಾಗಿ ನೇಮಕಕೊಂಡು ನ್ಯಾಯವಾದಿಯಾಗಿಯೂ, ನೋಟರಿ ಪಬ್ಲಿಕ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಎಣ್ಣೂರು ಜುಮ್ಮಾ ಮಸೀದಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಸುಳ್ಯ ತಾಲೂಕಿನ ಸಂಯುಕ್ತ ಜಮಾಯತಿನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News