ಶಿಥಿಲಗೊಂಡಿರುವ ಹಳೆ ನೇತ್ರಾವತಿ ಸೇತುವೆ: ಎನ್.ಐ.ಟಿ.ಕೆ ಅಧಿಕಾರಿಗಳಿಂದ ಪರಿಶೀಲನೆ
ಬಂಟ್ವಾಳ : ಬಿ.ಸಿ.ರೋಡಿನಿಂದ ಪಾಣೆಮಂಗಳೂರು ಪೇಟೆಗೆ ಸಂಪರ್ಕ ಕಲ್ಪಿಸುವ ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಸುರತ್ಕಲ್ ನ ರಾಷ್ಟ್ರೀಯ ತಾಂತ್ರಿಕ ಮಹಾ ವಿದ್ಯಾಲಯದ (ಎನ್.ಐ.ಟಿ.ಕೆ) ಅಧಿಕಾರಿಗಳು ಗುರುವಾರ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ ಅವರ ಉಪಸ್ಥಿತಿಯಲ್ಲಿ ಸೇತುವೆಯ ಧಾರಣಾ ಸಾಮರ್ಥ್ಯ ವನ್ನು ಪರಿಶೀಲನೆ ನಡೆಸಿದರು.
ಎನ್.ಐ.ಟಿ.ಕೆ ಪ್ರೊಫೆಸರ್ ಡಾ. ಪಲಿನಿ ಸ್ವಾಮಿ, ವಿಜಯನ್ ಅವರು ಸೇತುವೆಯ ಮೇಲ್ಮೈ ಪರಿಶೀಲನೆ ನಡೆಸಿದ್ದು. ಮುಂಗಾರು ಚುರುಕಾಗಿರುವ ಹಿನ್ನಲೆಯಲ್ಲಿ ನೇತ್ರಾವತಿ ತುಂಬಿ ಹರಿಯುತ್ತಿದ್ದ ಕಾರಣ ಸೇತುವೆಯ ಪಿಲ್ಲರ್ ಸಹಿತ ಪೂರ್ಣ ಪ್ರಮಾಣದ ಪರಿಶೀಲನೆ ನಡೆಸಲು ಅಧಿಕಾರಿಗಳ ತಂಡಕ್ಕೆ ಸಾಧ್ಯವಾಗದೆ ಮತ್ತೊಮ್ಮೆ ಪರಿಶೀಲನೆ ನಡೆಸಲು ಬರುವುದಾಗಿ ತಿಳಿಸಿ ವಾಪಾಸ್ಸಾಗಿದ್ದಾರೆ.
ಶಿಥಿಲಾವಸ್ಥಗೆ ತಲುಪಿರುವ ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಈ ಹಿಂದೆಯೇ ಘನ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಈ ಆದೇಶದ ಹಿನ್ನಲೆಯಲ್ಲಿ ಇತ್ತೀಚೆಗೆ ಪುರಸಭೆ ವತಿಯಿಂದ ಸೇತುವೆ ಮೇಲೆ ಘನ ವಾಹನ ಸಂಚಾರ ನಡೆಸದಂತೆ ಕಬ್ಬಿಣದ ಕಮಾನು ಅಳವಡಿಸಲಾಗಿತ್ತು. ಘನ ವಾಹನವೊಂದು ಈ ಕಮಾನಿಗೆ ಡಿಕ್ಕಿ ಹೊಡೆದು ಕೆಳಕ್ಕೆ ಬಿದ್ದಿದ್ದರಿಂದ ಸೇತುವೆ ಮೇಲೆ ಎಲ್ಲಾ ವಾಹನ ನಿಷೇಧಿಸಿ ಬಂಟ್ವಾಳ ತಹಶೀಲ್ದಾರರು ಆದೇಶ ಹೊರಡಿಸಿ ಸೇತುವೆಗೆ ಟೇಪ್ ಅಳವಡಿಸಿ ಬಂದ್ ಮಾಡಲಾಗಿತ್ತು.
ಸೇತುವೆಯಲ್ಲಿ ಲಘು ವಾಹನ ಸಂಚಾರವನ್ನೂ ನಿಷೇಧಿಸಿದ್ದರಿಂದ ಪಾಣೆಮಂಗಳೂರು ಪೇಟೆ ಸಹಿತ, ಅಕ್ಕರಂಗಡಿ, ನಂದಾವರ, ಮೆಲ್ಕಾರ್ ಮೊದಲಾದ ಪ್ರದೇಶಗಳ ಜನ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಇಲ್ಲದೆ ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಅವರು ಈ ಬಗ್ಗೆ ಸಂಚಾರ ನಿಷೇಧ ತೆರವು ಆದೇಶ ವಾಪಾಸು ಪಡೆದು ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಪುರಸಭಾ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರು. ಬಳಿಕ ನಿರ್ಣಯದ ಪ್ರತಿಯೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಪಾಣೆಮಂಗಳೂರು ಊರಿನ ಅಸ್ತಿತ್ವವೇ ಈ ಸೇತುವೆಯಾಗಿದ್ದು, ನಂದಾವರದ ಪ್ರಸಿದ್ದ ದೇವಸ್ಥಾನ, ದರ್ಗಾ, ಮಸೀದಿ, ಹಳೆಯ ಕಾಲದ ಶಾರದಾ ಪ್ರೌಢಶಾಲೆ ಸಹಿತ ಜನೋಪಯೋಗಿ ಸ್ಥಳಗಳಿಗೆ ಸಂಚಾರ ಮಾರ್ಗ ಇದೇ ಆಗಿರುವುದರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಆದೇಶಿಸಲು ಅಧಿಕಾರಿಗಳಿಗೆ ಸೂಚಿಸಬೇಕು. ಸದ್ರಿ ಸೇತುವೆಯ ದುರಸ್ತಿಗೆ ಸಂಬಂಧಪಟ್ಟಂತೆ ಪುರಸಭೆಯಿಂದಾಗುವ ಎಲ್ಲ ವ್ಯವಸ್ಥೆ ಗಳನ್ನೂ ನಾವು ಮಾಡುತ್ತೇವೆ ಎಂದು ಕೋರಿಕೊಂಡ ಹಿನ್ನಲೆಯಲ್ಲಿ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲಾಧಿಕಾರಿ ಅವರು ಸದ್ರಿ ಸೇತುವೆಯಲ್ಲಿ ಧಾರಣೆ ಸಾಮಥ್ರ್ಯ ಪರೀಕ್ಷೆವರೆಗೂ ಲಘು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆದೇಶ ನೀಡಿದ್ದರು.
ಪುರಸಭಾಧ್ಯಕ್ಷ ವಾಸು ಪೂಜಾರಿ, ಮುಖ್ಯಾಧಿಕಾರಿ ನಝೀರ್ ಅಹ್ಮದ್, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಆರೋಗ್ಯಾಧಿಕಾರಿ ರತ್ನಪ್ರಸಾದ್ ಜೊತೆಗಿದ್ದರು.